ನವದೆಹಲಿ: ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಜೊಮಾಟೊ ತನ್ನ ಕಡ್ಡಾಯ ಪ್ಲಾಟ್ ಫಾರ್ಮ್ ಶುಲ್ಕವನ್ನು ಪ್ರಮುಖ ನಗರಗಳಲ್ಲಿ ಪ್ರತಿ ಆರ್ಡರ್ ಗೆ 3 ರೂ.ಗಳಿಂದ 4 ರೂ.ಗೆ ಹೆಚ್ಚಿಸಿದೆ. ಹೊಸ ವರ್ಷದ ಮುನ್ನಾದಿನದಂದು ದಾಖಲೆಯ ಆಹಾರ ಆರ್ಡರ್ಗಳಿಂದ ಉತ್ತೇಜಿತವಾಗಿರುವ ಜೊಮ್ಯಾಟೊ ಈಗ ಪ್ಲಾಟ್ಫಾರ್ಮ್ ಫೀಯನ್ನು 1 ರೂ. ಹೆಚ್ಚಿಸಿದೆ. ಹೊಸ ದರಗಳು ಜನವರಿ 1ರಿಂದ ಜಾರಿಗೆ ಬಂದಿವೆ.
ಹೊಸ ವರ್ಷದ ಮುನ್ನಾದಿನದಂದು ಕೆಲ ನಗರಗಳಲ್ಲಿ ಜೊಮ್ಯಾಟೊ ತಾತ್ಕಾಲಿಕವಾಗಿ ಪ್ರತಿ ಆರ್ಡರ್ಗೆ 9 ರೂಪಾಯಿಗಳವರೆಗೂ ಪ್ಲಾಟ್ಫಾರ್ಮ್ ಫೀ ವಿಧಿಸಿದೆ. ಅಂತರರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆ ಸಿಎಲ್ಎಸ್ಎ ಜೊಮ್ಯಾಟೊ ಷೇರುಗಳ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಕಂಪನಿಯ ಷೇರುಗಳು ಮಂಗಳವಾರ ಗರಿಷ್ಠ ಮಟ್ಟದಲ್ಲಿ (ಬೆಳಿಗ್ಗೆ 126 ರೂ.) ಪ್ರಾರಂಭವಾದವು.
ಕಳೆದ ವರ್ಷ ಆಗಸ್ಟ್ನಲ್ಲಿ ಜೊಮಾಟೊ ತನ್ನ ಲಾಭಾಂಶ ಹೆಚ್ಚಿಸಿಕೊಳ್ಳಲು 2 ರೂ. ಪ್ಲಾಟ್ಫಾರ್ಮ್ ಫೀ ವಿಧಿಸಲು ಆರಂಭಿಸಿತ್ತು. ನಂತರ ಈ ಫೀಯನ್ನು 3 ರೂ.ಗೆ ಹೆಚ್ಚಿಸಲಾಗಿತ್ತು. ಈಗ ಜನವರಿ 1 ರಂದು ಫೀಯನ್ನು ಮತ್ತೆ 1 ರೂ. ಹೆಚ್ಚಿಸಿ 4 ರೂ. ಮಾಡಲಾಗಿದೆ. ಹೊಸ ಪ್ಲಾಟ್ಫಾರ್ಮ್ ಶುಲ್ಕ ಜೊಮಾಟೊ ಗೋಲ್ಡ್ ಸೇರಿದಂತೆ ಎಲ್ಲಾ ಗ್ರಾಹಕರಿಗೆ ಅನ್ವಯವಾಗಲಿದೆ.
ಜೊಮಾಟೊ ಮತ್ತು ಅದರ ಅಂಗಸಂಸ್ಥೆ, ತ್ವರಿತ ವಾಣಿಜ್ಯ ಪ್ಲಾಟ್ಫಾರ್ಮ್ ಬ್ಲಿಂಕಿಟ್ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೊಸ ವರ್ಷದ ಮುನ್ನಾದಿನದಂದು ಅತಿ ಹೆಚ್ಚು ಆರ್ಡರ್ ಮತ್ತು ಬುಕಿಂಗ್‌ಗಳನ್ನು ಪಡೆದಿವೆ.
"ನಾವು ಬಹುತೇಕ 2015ರಿಂದ 2020ರವರೆಗೆ ಹೊಸ ವರ್ಷದ ಮುನ್ನಾದಿನಗಳಂದು ಡೆಲಿವರಿ ಮಾಡಿದಷ್ಟೇ ಆರ್ಡರ್ಗಳನ್ನು ಈ ವರ್ಷವೂ ಡೆಲಿವರಿ ಮಾಡಿದ್ದೇವೆ. ಭವಿಷ್ಯದ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ" ಎಂದು ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
2022ರ ಹೊಸ ವರ್ಷದ ಸಂದರ್ಭದಲ್ಲಿ ಡೆಲಿವರಿ ಮಾಡಿದಷ್ಟು ಆರ್ಡರ್ಗಳನ್ನು ಈ ಬಾರಿಯ ಹೊಸ ವರ್ಷದ ಮುನ್ನಾದಿನದ ಸಂಜೆಯೊಳಗೇ ಡೆಲಿವರಿ ಮಾಡಿದ್ದೇವೆ ಎಂದು ಬ್ಲಿಂಕಿಟ್ನ ಸಿಇಒ ಅಲ್ಬಿಂದರ್ ಧಿಂಡ್ಸಾ ಹೇಳಿದರು.
ಏತನ್ಮಧ್ಯೆ 4.2 ಕೋಟಿ ರೂ.ಗಳಷ್ಟು ಕಡಿಮೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸಿದ ಆರೋಪದ ಮೇಲೆ ದೆಹಲಿ ಮತ್ತು ಕರ್ನಾಟಕದ ತೆರಿಗೆ ಅಧಿಕಾರಿಗಳಿಂದ ಜೊಮಾಟೊಗೆ ನೋಟಿಸ್ ಬಂದಿದೆ. ತೆರಿಗೆ ಬೇಡಿಕೆ ನೋಟಿಸ್ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಜೊಮಾಟೊ ಹೇಳಿದೆ. ವಿತರಣಾ ಶುಲ್ಕವಾಗಿ ಸಂಗ್ರಹಿಸಿದ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ 400 ಕೋಟಿ ರೂಪಾಯಿ ಪಾವತಿಸುವಂತೆ ಶೋಕಾಸ್ ನೋಟಿಸ್ ಬಂದ ನಂತರ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಭಾರತದ ಆರ್ಥಿಕತೆಗೆ ಉತ್ತೇಜನ ನೀಡಿದ ಕಚ್ಚಾ ತೈಲ ಬೆಲೆ ಇಳಿಕೆ