ಅಹಮದಾಬಾದ್: ಭಾರತದ ಪ್ರತಿಷ್ಠಿತ ಉದ್ಯಮ ಸಂಸ್ಥೆ ವೇದಾಂತ ಮತ್ತು ವಿಶ್ವಮಟ್ಟದ ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಿಕಾ ಸಂಸ್ಥೆ ಫಾಕ್ಸ್ಕಾನ್ ಜಂಟಿಯಾಗಿ ಗುಜರಾತ್ ಸರ್ಕಾರದೊಂದಿಗೆ ಔದ್ಯೋಗಿಕ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಚಿಪ್ ಮತ್ತು ಡಿಸ್ಪ್ಲೇ FAB ತಯಾರಿಸುವ ಘಟಕ ಸ್ಥಾಪನೆಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಗಾಂಧಿನಗರದಲ್ಲಿ ನಡೆದ ಸಭೆಯಲ್ಲಿ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಈ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಎರಡೂ ಕಂಪನಿಗಳು ಗುಜರಾತ್‌ನಲ್ಲಿ ಉದ್ಯಮ ಘಟಕವನ್ನು ಸ್ಥಾಪಿಸಲು 1,54,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದು ಒಂದು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಸಂದರ್ಭದಲ್ಲಿ ಹೇಳಿದರು. ಈ ಘಟಕ ಸ್ಥಾಪನೆಗೆ ಮತ್ತು ಅದನ್ನು ಯಶಸ್ವಿಗೊಳಿಸಲು ಕಾರ್ಯಗತಗೊಳಿಸಲು ತಮ್ಮ ಸರ್ಕಾರವು ಸಹಕಾರ ನೀಡಲಿದೆ ಎಂದು ಪಟೇಲ್ ಹೇಳಿದರು.
ಇದನ್ನೂ ಓದಿ: ಸೆಮಿಕಂಡಕ್ಟರ್ಗಳ ಪ್ರಮುಖ ಪೂರೈಕೆದಾರ ರಾಷ್ಟ್ರವನ್ನಾಗಿಸುವುದು ನಮ್ಮ ಗುರಿ : ಪ್ರಧಾನಿ ಮೋದಿ