ನವದೆಹಲಿ: ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಇದರಿಂದ ಈ ಬಾರಿ ಹಣಕಾಸು ಸಚಿವರ ಮಂಡಿಸಲಿರುವ ಬಜೆಟ್‌ನಲ್ಲಿ ತೆರಿಗೆ ವಿನಾಯ್ತಿ ಉಡುಗೊರೆ ಸಿಗಲಿದೆ ಎನ್ನುವುದು ಮಧ್ಯಮ ವರ್ಗದವರ ಆಶಯ. ಹಿಂದೆ ಸರ್ಕಾರವು 2020ರಲ್ಲಿ ಹೊಸ ತೆರಿಗೆ ವಿನಾಯಿತಿ ಪರಿಚಯ ಮಾಡಿತ್ತು. ಹಣದುಬ್ಬರದಿಂದ ತೊಂದರೆಗೆ ಸಿಲುಕಿರುವ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 80ಸಿ ವ್ಯಾಪ್ತಿಯನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು ಎನ್ನುವುದು ಬಹು ಜನರ ಆಗ್ರಹ.
ಪ್ರಸ್ತುತ ಬಜೆಟ್‌ನಲ್ಲಿ ಸ್ವಾವಲಂಬಿ ಭಾರತ ಅಭಿಯಾನವನ್ನು ಉತ್ತೇಜಿಸಲು ಸರ್ಕಾರವು ಅನೇಕ ಮಹತ್ವದ ಹಾಗೂ ದೊಡ್ಡ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಘೋಷಣೆಗಳಿಂದ ದೇಶ ಹಾಗೂ ಜನರನ್ನು ಸ್ವಾವಲಂಬಿಯಾಗಿಸುವುದು ಮೂಲ ಉದ್ದೇಶವಾಗಲಿದೆ. ಹೀಗಾಗಿ ಸರ್ಕಾರವು 'ಮೇಕ್ ಇನ್ ಇಂಡಿಯಾ' ಮತ್ತು 'ವೋಕಲ್ ಫಾರ್ ಲೋಕಲ್' ಯೋಜನೆಗಳಿಗೆ ಹೆಚ್ಚು ಗಮನ ಕೊಡಬಹುದು. ಸಾಮಾನ್ಯ ಜನರಿಗೆ ಹಾಗೂ ಆರ್ಥಿಕತೆಗೆ ಪರಿಹಾರ ನೀಡುವುದು ಇದರ ಉದ್ದೇಶ. ‘ವೋಕಲ್ ಫಾರ್ ಲೋಕಲ್’ ಅನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಬಜೆಟ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ರಫ್ತು ಕೇಂದ್ರಗಳ ರಚನೆಯನ್ನು ಘೋಷಿಸಬಹುದು. ಇದಕ್ಕಾಗಿ 4,500 ರಿಂದ 5,000 ಕೋಟಿ ರೂ.ವರೆಗಿನ ನಿಧಿಯನ್ನು ಘೋಷಣೆ ಮಾಡಬಹುದು.
ಮೇಕ್ ಇನ್ ಇಂಡಿಯಾ: ಮುಂದಿನ 10 ವರ್ಷಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕತೆಯನ್ನು ಬೆಳೆಸಲು ಸರ್ಕಾರವು ಪ್ರತಿಯೊಂದು ಕ್ಷೇತ್ರಕ್ಕೂ ಗಮನ ಹರಿಸಬೇಕಾಗುತ್ತದೆ. ಇದರೊಂದಿಗೆ ಈ ಬಾರಿಯ ಬಜೆಟ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡಲು ಸರ್ಕಾರ ಹೊರಟಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಅಂದರೆ ಒಡಿಒಪಿ ಅಡಿಯಲ್ಲಿ ರಫ್ತು ಹಬ್ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. 50 ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆಯೊಂದಿಗೆ ಇದರ ತಯಾರಿ ಆರಂಭವಾಗಲಿದೆ. ಮುಂದೆ, 750 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಸರ್ಕಾರವು ಲಾಜಿಸ್ಟಿಕ್ಸ್ ಮತ್ತು ಬಹುಮಾದರಿ ಸಂಪರ್ಕವನ್ನು ಸಿದ್ಧಪಡಿಸುತ್ತದೆ.
'ಒಂದು ಜಿಲ್ಲೆ ಒಂದು ಉತ್ಪನ್ನ': ಉತ್ತರ ಪ್ರದೇಶ ಸರ್ಕಾರವು ಜನವರಿ 2018ರಲ್ಲಿ ಓಡಿಓಪಿಯನ್ನು ಪ್ರಾರಂಭಿಸಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಕುಶಲ ಕರ್ಮಿಗಳು ಮತ್ತು ಉದ್ಯಮಿಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು. ನಂತರ, ಈ ಯೋಜನೆಯ ಯಶಸ್ಸನ್ನು ಕಂಡಿರುವ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅಳವಡಿಸಿಕೊಂಡಿದೆ. ಸದ್ಯ ಈ ಯೋಜನೆಯನ್ನು ದೇಶದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಬಜೆಟ್ ನಂತರ ಈ ಯೋಜನೆಗೆ ಹೊಸ ಉತ್ತೇಜನೆ ಲಭಿಸುವ ನಿರೀಕ್ಷೆಯಿದೆ.
ಭಾರತದಲ್ಲಿ ಚಿಕಿತ್ಸೆ ವೆಚ್ಚ ಅಗ್ಗವಾಗುವ ಸಾಧ್ಯತೆ: ಪ್ರಪಂಚದಾದ್ಯಂತ ಅನೇಕ ದೇಶಗಳಿಗಿಂತ ಭಾರತದಲ್ಲಿ ಚಿಕಿತ್ಸೆ ನೀಡುವುದು ತುಂಬಾ ಅಗ್ಗವಾಗಿದೆ. ಈ ಕಾರಣದಿಂದಾಗಿ ಇಲ್ಲಿ ವೈದ್ಯಕೀಯ ಪ್ರವಾಸೋದ್ಯಮವು ಬಹಳ ಜನಪ್ರಿಯವಾಗಿದೆ. ಆದರೆ, ಭಾರತೀಯರ ಸರಾಸರಿ ಆದಾಯದ ಪ್ರಕಾರ, ಚಿಕಿತ್ಸೆ ಪಡೆಯುವುದು ತುಂಬಾ ದುಬಾರಿಯಾಗಿದೆ. ಆದರೆ, ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಿಂದ ಆರೋಗ್ಯ ವಿಮೆ ಹಾಗೂ ಚಿಕಿತ್ಸಾ ವೆಚ್ಚವನ್ನು ಅಗ್ಗವಾಗಿಸಲು ಕ್ರಮವಹಿಸುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ಗೆ ಕ್ಷಣಗಣನೆ: ರಾಷ್ಟ್ರಪತಿ ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್