ಹೈದರಾಬಾದ್: ಭಾರತೀಯ ರಿಸರ್ವ್ ಬ್ಯಾಂಕ್ ಮೊನ್ನ ಪ್ರಕಟಿಸಿದ ತನ್ನ ಆರ್ಥಿಕ ನೀತಿಯಲ್ಲಿ ರೆಪೋ ರೇಟ್ ಏರಿಕೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಂಡಿದೆ. ಈ ಮೂಲಕ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದು ಸಾಲಗಾರರಿಗೆ ಸ್ವಲ್ಪ ಸಮಾಧಾನ ತಂದಿದೆ. ಆದರೂ, ಈ ಪರಿಹಾರ ಎಷ್ಟು ಕಾಲ ಉಳಿಯುತ್ತದೆ ಎಂಬ ಬಗ್ಗೆ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.
ಸಾಲಗಳು ದುಬಾರಿಯಾದಾಗ ಸಾಲಗಾರರು ಸವಾಲುಗಳನ್ನು ಎದುರಿಸುತ್ತಾರೆ. ಅವರ ಸಾಲ ಪಡೆಯುವ ಅರ್ಹತೆಯು ಕಡಿಮೆಯಾಗುತ್ತದೆ. ಈ ಪರಿಣಾಮವಾಗಿ, ಖರೀದಿಸಿದ ಮನೆ ಮೇಲೆ ಇದು ಪರಿಣಾಮ ಬೀರಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ ನೀವು ಗೃಹ ಸಾಲವನ್ನು ತೆಗೆದುಕೊಳ್ಳಬೇಕೇ? ಅಥವಾ ಸ್ವಲ್ಪ ಸಮಯ ಕಾಯಬೇಕೇ? ಎಂಬ ಗೊಂದಲದಲ್ಲಿದ್ದೀರಾ.. ಅದಕ್ಕೆಲ್ಲ ಪರಿಹಾರ ಇಲ್ಲಿದೆ.
ವಾರ್ಷಿಕ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡಾ 5.66 ಕ್ಕೆ ಇಳಿದಿದೆ. ಹಿಂದಿನ ತಿಂಗಳಿನ ಶೇಕಡಾ 6.44 ಕ್ಕೆ ಹೋಲಿಸಿದರೆ ಇದು 15 ತಿಂಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಆರ್‌ಬಿಐ ಇದರ ಮೇಲ್ವಿಚಾರಣೆ ಮುಂದುವರಿಸಲಿದೆ. ಮುಂಬರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಲೂ ಬಹುದು. ಆದ್ದರಿಂದ, ನೀವು ಈಗಾಗಲೇ ಮನೆ ಖರೀದಿಸಲು ಯೋಜಿಸುತ್ತಿದ್ದರೆ, ಬಡ್ಡಿದರಗಳು ಏರಿಳಿತಗೊಳ್ಳುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಗೃಹ ಸಾಲಗಳು ಸಾಮಾನ್ಯವಾಗಿ ಫ್ಲೋಟಿಂಗ್ ಬಡ್ಡಿಯ ಆಧಾರದ ಮೇಲೆ ಇರುತ್ತವೆ. ರೆಪೊ ದರ ಬದಲಾದಾಗಲೆಲ್ಲಾ ಇವು ಬದಲಾಗುತ್ತವೆ. ಆದ್ದರಿಂದ, ಬಡ್ಡಿದರಗಳ ಬಗ್ಗೆ ಯೋಚಿಸದೇ ಗೃಹ ಸಾಲ ಪಡೆಯಲು ಸಿದ್ಧರಾಗಿ.
ಸ್ವಲ್ಪ ಯೋಜನೆ ಹಾಕಿಕೊಂಡರೆ ಮನೆ ಮಾಲೀಕರಾಗುವ ಕನಸು ನನಸಾಗಬಹುದು. ನೀವು ಆರ್ಥಿಕವಾಗಿ ಸ್ಥಿರವಾಗಿದ್ದೀರಾ ಅಥವಾ ಇಲ್ಲವೇ ಎಂಬುದು ಮುಖ್ಯ. ಗೃಹ ಸಾಲವು ದೀರ್ಘಾವಧಿಯವರೆಗೆ ಇರುತ್ತದೆ. ಆದ್ದರಿಂದ, ಮಾಸಿಕ ಪಾವತಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ಸಾಲವು ಸಾಮಾನ್ಯವಾಗಿ ಮನೆಯ ಮೌಲ್ಯದ 75-80 ಪ್ರತಿಶತದವರೆಗೆ ಲಭ್ಯವಿದೆ. ಮುದ್ರಾಂಕ ಶುಲ್ಕ ಮತ್ತು ನೋಂದಣಿಯಂತಹ ಇತರ ವೆಚ್ಚಗಳಿವೆ. ಆಸ್ತಿ ಮೌಲ್ಯದ ಕನಿಷ್ಠ 30-40 ಪ್ರತಿಶತವನ್ನು ನೀವೇ ಭರಿಸಬೇಕಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಮನೆ ಕಟ್ಟುವ ಅಥವಾ ಖರೀದಿಸುವ ಯೋಚನೆ ಮಾಡಿ
ಉತ್ತಮ ಕ್ರೆಡಿಟ್ ಸ್ಕೋರ್ ಮುಖ್ಯ: ಬ್ಯಾಂಕುಗಳು ಈಗ ಸಾಲದ ಬಡ್ಡಿದರಗಳನ್ನು ಕ್ರೆಡಿಟ್ ಸ್ಕೋರ್‌ಗಳಿಗೆ ಲಿಂಕ್ ಮಾಡುತ್ತಿವೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮಗೆ ಬಡ್ಡಿ ರಿಯಾಯಿತಿ ಸಿಗುತ್ತದೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಉಳಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ, ನೀವು ಹೆಚ್ಚಿನ ಬಡ್ಡಿದರಗಳನ್ನು ಪಾವತಿಸಬೇಕಾಗುತ್ತದೆ. ಇದು ನಿಮ್ಮ ಸಾಲವನ್ನು ಹೆಚ್ಚು ದುಬಾರಿಯಾಗಿಸುತ್ತದೆ. ಸ್ಕೋರ್ 750 ಅಂಕಗಳಿಗಿಂತ ಹೆಚ್ಚು ಇದ್ದರೆ, ಸಾಲಗಳು ಸುಲಭವಾಗಿ ಲಭ್ಯವಿವೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಸ್ಥಿತಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ.
ಗಗನಮುಖಿಯಾದ ಬಡ್ಡಿದರ: ಪ್ರಸ್ತುತ ಬಡ್ಡಿದರಗಳು ಹೆಚ್ಚಾಗಿವೆ. ಹಣದುಬ್ಬರ ಕಡಿಮೆಯಾಗಿ, ಸ್ಥಿರವಾಗುವವರೆಗೂ ಆರ್‌ಬಿಐ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ. ಅದು ಒಂದು ಹಂತಕ್ಕೆ ಬಂದ ಬಳಿಕ ಬಡ್ಡಿದರಗಳನ್ನು ಕಡಿತಗೊಳಿಸಬಹುದು. ನೀವು ಮನೆ ಖರೀದಿಸಲು ನಿರ್ಧರಿಸಿದರೆ, ಬಡ್ಡಿದರಗಳು ಕಡಿಮೆಯಾಗಲು ಕಾಯುವ ಅಗತ್ಯವಿಲ್ಲ. ನೀವು ಫ್ಲೋಟಿಂಗ್ ಬಡ್ಡಿಯ ಆಧಾರದ ಮೇಲೆ ಸಾಲ ಪಡೆಯುತ್ತೀರಿ. ಆದ್ದರಿಂದ, ರೆಪೊ ದರ ಕಡಿಮೆಯಾದಾಗಲೆಲ್ಲಾ, ಅದಕ್ಕೆ ಲಿಂಕ್ ಮಾಡಿದ ಗೃಹ ಸಾಲದ ಮೇಲಿನ ಬಡ್ಡಿ ಕಡಿಮೆಯಾಗುತ್ತದೆ. ಹಾಗಾಗಿ, ಯಾವುದೇ ತೊಂದರೆ ಆಗುವುದಿಲ್ಲ.
ನೀವು ಸ್ಥಿರ ಆದಾಯ ಮತ್ತು ಕಡಿಮೆ ಸಾಲದಿಂದ ಆದಾಯದ ಅನುಪಾತವನ್ನು ಹೊಂದಿದ್ದರೆ, ಸಬ್ಸಿಡಿ ಬಡ್ಡಿಯಲ್ಲಿ ಸಾಲವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು. ನೀವು ದೀರ್ಘಕಾಲದವರೆಗೆ ಖಾತೆಯನ್ನು ನಿರ್ವಹಿಸಿದ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಲು ಪ್ರಯತ್ನಿಸಬಹುದು. ನಿಮ್ಮ ಎಲ್ಲಾ ಹಣಕಾಸಿನ ವಿವರಗಳು ಅವರ ಬಳಿ ಇವೆ. ಆದ್ದರಿಂದ, ಸಾಲವನ್ನು ತೆಗೆದುಕೊಳ್ಳುವಾಗ ಇದು ಬಹಳಷ್ಟು ಸಹಾಯ ಮಾಡುತ್ತದೆ. ಯೋಜಿಸಿದಂತೆ ಯಾವುದೇ ತೊಂದರೆಗಳಿಲ್ಲದೆ 10-20 ವರ್ಷಗಳವರೆಗೆ ಕಂತುಗಳನ್ನು ನಿರಂತರವಾಗಿ ಪಾವತಿಸುತ್ತೀರಿ ಎಂದು ನೀವು ಭಾವಿಸಿದಾಗ ಗೃಹ ಸಾಲವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ರಿಯಲ್ ಎಸ್ಟೇಟ್ ಬೆಲೆಗಳು ಕಾಲಕಾಲಕ್ಕೆ ಹೆಚ್ಚಾಗುತ್ತಿರುವುದರಿಂದ ಮನೆ ಖರೀದಿಸಲು ಕಾಯುವುದರಲ್ಲಿ ಅರ್ಥವಿಲ್ಲ.
ಇದನ್ನು ಓದಿ:Life Insurance: ಜೀವವಿಮಾ ಮಾರುಕಟ್ಟೆಗೆ ಮತ್ತೊಂದು ಕಂಪನಿ ಎಂಟ್ರಿ: Go Digitಗೆ ಐಆರ್ಡಿಎಐ ಅನುಮೋದನೆ