ನವದೆಹಲಿ: ದೇಶದಲ್ಲಿ ಎಸ್‌ಸಿ ಸಮುದಾಯವನ್ನು ಮೇಲೆತ್ತುವ ಪ್ರಯತ್ನವಾಗಿ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (ಪಿಎಸ್‌ಬಿ) ಈ ವರ್ಷದ ಅಕ್ಟೋಬರ್ 2 ರಿಂದ ಪರಿಶಿಷ್ಟ ಜಾತಿಗಳ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ಅಭಿಯಾನ ಪ್ರಾರಂಭಿಸಲಿವೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಎಸ್‌ಸಿ) ತಿಳಿಸಿದೆ. ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲಾ ಗುರುವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಬ್ಯಾಂಕ್‌ಗಳು ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಕ್ಟೋಬರ್ 2 ರಿಂದ ಡಿಸೆಂಬರ್ 31 ರವರೆಗೆ ಅಭಿಯಾನ ನಡೆಸಲಿವೆ. ಅಲ್ಲದೇ ಅಕ್ಟೋಬರ್ 31 ರೊಳಗೆ ಬಾಕಿ ಇರುವ ಪರಿಶಿಷ್ಟರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಪೂರ್ಣಗೊಳಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ವಿಜಯ್ ಸಂಪ್ಲಾ ಹೇಳಿದರು.
ಬ್ಯಾಂಕ್‌ಗಳ ಶಾಖೆಗಳು ಕೇಂದ್ರ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಕಾರ್ಯಕ್ರಮದಡಿ ವಿಶೇಷವಾಗಿ ಎಸ್‌ಸಿ ಸಮುದಾಯಕ್ಕಾಗಿ ನಿಗದಿಪಡಿಸಿದ ಗುರಿಗಳನ್ನು ಪೂರ್ಣಗೊಳಿಸಲಿವೆ. ಹಾಗೆಯೇ, ಎನ್‌ಆರ್‌ಎಲ್‌ಎಂ, ಎನ್‌ಯುಎಲ್‌ಎಂನಂತಹ ಇತರ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ, ಮುದ್ರಾ, ಸ್ವಾಭಿಮಾನ್ ಮತ್ತು ಆವಾಸ್ ಯೋಜನೆ, ಎಸ್‌ಸಿ ಫಲಾನುಭವಿಗಳಿಗೆ ಮೀಸಲಿಟ್ಟ ಶೇಕಡಾವಾರು ಪ್ರಮಾಣವನ್ನು ಸಾಧಿಸಲು ಬ್ಯಾಂಕ್‌ಗಳು ಗುರಿಯನ್ನು ನಿಗದಿಪಡಿಸಬೇಕು ಎಂದು ಸಂಪ್ಲಾ ತಿಳಿಸಿದರು.
ಹಣದುಬ್ಬರ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಭಾರಿ ಸಂಕಷ್ಟ ಎದುರಿಸುತ್ತಿರುವ ಎಸ್‌ಸಿ ಸಮುದಾಯದ ಉನ್ನತಿಗೆ ಒತ್ತು ನೀಡಿದ ಸಂಪ್ಲಾ, ಎಲ್ಲ ಯೋಜನೆಗಳಲ್ಲಿನ ಎಸ್‌ಸಿ ಫಲಾನುಭವಿಗಳ ನೇಮಕಾತಿ ಮತ್ತು ವ್ಯಾಪ್ತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮೀಸಲಾತಿ ನೀತಿಯ ವರದಿಯನ್ನು ಕಳುಹಿಸುತ್ತವೆ ಮತ್ತು ಎಲ್ಲ ಯೋಜನೆಗಳ ಪ್ರಗತಿಯನ್ನು NCSC ಗೆ ಪ್ರತಿ ವರ್ಷ ಎರಡು ಬಾರಿ ಸಲ್ಲಿಸಲಿವೆ ಎಂದರು.
ಎನ್‌ಸಿಎಸ್‌ಸಿ ಅಧ್ಯಕ್ಷರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಸಾಲ ಮತ್ತು ಇತರ ಕಲ್ಯಾಣ ಯೋಜನೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಒಂದು ದಿನದ ನಂತರ ಸಂಪ್ಲಾ ಅವರ ಹೇಳಿಕೆಗಳು ಬಂದಿವೆ.
ಇದನ್ನೂ ಓದಿ: ಬೆಳೆ ವಿಮೆ ಪ್ರಿಮಿಯಂ ಹಣ ವರ್ಗಾಯಿಸದ ಬ್ಯಾಂಕ್ಗೆ 50 ಸಾವಿರ ರೂ ದಂಡ