ಮುಂಬೈ: ಶುಕ್ರವಾರ ನಡೆಯಲಿರುವ ಆರ್ಬಿಐ ಸಭೆಯ ನಿರ್ಧಾರದ ಮೇಲೆ ಕಣ್ಣಿಟ್ಟಿರುವ ಷೇರು ಮಾರುಕಟ್ಟೆ ಸತತ ಏಳು ದಿನಗಳ ಏರಿಕೆಯ ನಂತರ ಇಂದು (ಗುರುವಾರ) ಇಳಿಕೆಯೊಂದಿಗೆ ವಹಿವಾಟು ಮುಗಿಸಿದವು. ಏಷ್ಯಾದ ಮಾರುಕಟ್ಟೆಗಳಲ್ಲಿನ ಇಳಿಕೆಯ ಪ್ರವೃತ್ತಿ ಕೂಡ ಭಾರತದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಗುರುವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 69,695 ಗರಿಷ್ಠ ಮತ್ತು 69,321 ಕನಿಷ್ಠ ಮಟ್ಟವನ್ನು ತಲುಪಿ 132 ಪಾಯಿಂಟ್ಗಳ ಸಾಧಾರಣ ನಷ್ಟದೊಂದಿಗೆ 69,522ರಲ್ಲಿ ಸ್ಥಿರವಾಯಿತು. ಎನ್ಎಸ್ಇ ನಿಫ್ಟಿ-5037 ಪಾಯಿಂಟ್ಸ್ ಕುಸಿದು 20,901ಕ್ಕೆ ತಲುಪಿದೆ. ಕಳೆದ ಏಳು ವಹಿವಾಟು ಅವಧಿಗಳಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶೇಕಡಾ 6ರಷ್ಟು ಏರಿಕೆಯಾಗಿದ್ದವು.
ಆದಾಗ್ಯೂ ವಿಶಾಲ ಸೂಚ್ಯಂಕಗಳು ಗುರುವಾರ ಲಾಭದೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 0.7ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡಾ 0.3ರಷ್ಟು ಏರಿಕೆಯಾಗಿದೆ. ವಲಯವಾರು ನೋಡಿದರೆ ವಿದ್ಯುತ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದರೆ, ಸಕ್ಕರೆ ವಲಯದ ಷೇರುಗಳು ಇಂದು ಅತ್ಯಧಿಕ ಮಾರಾಟವಾದವು. ಪೋಸ್ಟ್ಪೇಡ್ ಸಾಲಗಳ ಪ್ರಮಾಣ ಕಡಿಮೆ ಮಾಡುವ ನಿರ್ಧಾರದಿಂದ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿಂದ ಪೇಟಿಎಂ ಷೇರು ಇಂದು ಶೇಕಡಾ 19ರಷ್ಟು ಕುಸಿಯಿತು.
ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಮೌಲ್ಯದಲ್ಲಿ ಹೆಚ್ಚಳ ಮತ್ತು ದೇಶೀಯ ಷೇರುಗಳಲ್ಲಿನ ಸ್ತಬ್ಧ ಪ್ರವೃತ್ತಿಯ ಹಿನ್ನೆಲೆಯಲ್ಲಿ ಭಾರತೀಯ ರೂಪಾಯಿ ಗುರುವಾರ ಯುಎಸ್ ಡಾಲರ್ ವಿರುದ್ಧ 4 ಪೈಸೆ ಕುಸಿದು 83.36ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.36ಕ್ಕೆ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ 83.37 ಕ್ಕೆ ಇಳಿಯಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 83.36 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕಡಿಮೆಯಾಗಿದೆ. ಬುಧವಾರ, ರೂಪಾಯಿ 5 ಪೈಸೆ ಏರಿಕೆಯಾಗಿ ಡಾಲರ್ ಎದುರು 83.32ರಲ್ಲಿ ಸ್ಥಿರವಾಗಿತ್ತು.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಡಿಸೆಂಬರ್ 6 ರಿಂದ ಮೂರು ದಿನಗಳ ಸಭೆ ಪ್ರಾರಂಭಿಸಲಿದೆ. ಆರು ಸದಸ್ಯರ ಎಂಪಿಸಿಯ ನಿರ್ಧಾರವನ್ನು ದಾಸ್ ಡಿಸೆಂಬರ್ 8ರಂದು ಅನಾವರಣಗೊಳಿಸಲಿದ್ದಾರೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಬಡ್ಡಿ ಪೀಕುವ 17 'ಸ್ಪೈ ಲೋನ್' ಆ್ಯಪ್ ತೆಗೆದು ಹಾಕಿದ ಗೂಗಲ್