ಮುಂಬೈ: ಭಾರತದ ಪ್ರಮುಖ ಶೇರು ಸೂಚ್ಯಂಕಗಳು ಮಂಗಳವಾರದಂದು ಖರೀದಿ ಹಾಗೂ ಮಾರಾಟಗಳ ಪ್ರಕ್ರಿಯೆಗಳಿಂದ ಇಳಿಕೆಯಲ್ಲಿ ವಹಿವಾಟು ನಡೆಸಿದವು. ವಲಯವಾರು ನೋಡುವುದಾದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಉತ್ತಮ ಲಾಭದೊಂದಿಗೆ ವಹಿವಾಟು ನಡೆಸಿದರೆ, ಆಯ್ದ ಐಟಿ ಶೇರುಗಳು ಸಹ ಏರಿಕೆ ಕಂಡವು. ಮತ್ತೊಂದೆಡೆ ಲೋಹ ಮತ್ತು ಎಫ್ಎಂಸಿಜಿ ಶೇರುಗಳು ಕುಸಿದವು.
ವಹಿವಾಟಿನ ಒಂದು ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ 66,057.53 ರ ಗರಿಷ್ಠ ಮಟ್ಟವನ್ನು ಮುಟ್ಟಿತ್ತು ಮತ್ತು ನಂತರ 300 ಪಾಯಿಂಟ್ಗಳಷ್ಟು ಕುಸಿದು 65,752.63 ಕ್ಕೆ ಇಳಿಯಿತು. ಬಿಎಸ್ಇ ಬೆಂಚ್ಮಾರ್ಕ್ ಸೂಚ್ಯಂಕವು ಅಂತಿಮವಾಗಿ 107 ಪಾಯಿಂಟ್ಗಳಷ್ಟು ಕುಸಿದು 65,847 ಕ್ಕೆ ಕೊನೆಗೊಂಡಿತು. ಎನ್ಎಸ್ಇ ನಿಫ್ಟಿ-50 ಸುಮಾರು 100 ಪಾಯಿಂಟ್ಗಳ ವ್ಯಾಪ್ತಿಯಲ್ಲಿ ಚಲಿಸಿ 19,634 ರ ಗರಿಷ್ಠ ಮಟ್ಟಕ್ಕೆ ತಲುಪಿ 19,533 ಕ್ಕೆ ಇಳಿಯಿತು. ನಂತರ 26 ಪಾಯಿಂಟ್ಗಳ ಸಾಧಾರಣ ನಷ್ಟದೊಂದಿಗೆ 19,571 ಕ್ಕೆ ಕೊನೆಗೊಂಡಿತು.
ಸೆನ್ಸೆಕ್ಸ್-30 ಶೇರುಗಳ ಪೈಕಿ ಮಹೀಂದ್ರಾ & ಮಹೀಂದ್ರಾ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ತಲಾ 2 ಪ್ರತಿಶತದಷ್ಟು ಕುಸಿದವು. ಸನ್ ಫಾರ್ಮಾ, ನೆಸ್ಲೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ನಷ್ಟ ಅನುಭವಿಸಿದ ಇತರ ಪ್ರಮುಖ ಶೇರುಗಳಾಗಿವೆ. ಮತ್ತೊಂದೆಡೆ, ಟೆಕ್ ಮಹೀಂದ್ರಾ ಶೇಕಡಾ 2 ರಷ್ಟು ಲಾಭ ಗಳಿಸಿದೆ. ವಿಪ್ರೋ, ಬಜಾಜ್ ಫೈನಾನ್ಸ್, ಎಸ್ಬಿಐ ಮತ್ತು ಬಜಾಜ್ ಫಿನ್ ಸರ್ವ್ ಗಮನಾರ್ಹ ಲಾಭ ಗಳಿಸಿದ ಇತರ ಶೇರುಗಳಾಗಿವೆ.
ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಮಾರುಕಟ್ಟೆಯ ಪ್ರವೃತ್ತಿಯನ್ನು ಮೀರಿ ಶೇಕಡಾ 0.3 ರಷ್ಟು ಏರಿಕೆ ಕಂಡವು. ಬಿಎಸ್ಇಯಲ್ಲಿ 1,750 ಶೇರುಗಳು ಕುಸಿದರೆ, 1,850 ಶೇರುಗಳು ಏರಿಕೆ ಕಂಡವು. ವಲಯವಾರು ನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 3 ಕ್ಕಿಂತ ಹೆಚ್ಚಾಗಿದೆ; ಫಾರ್ಮಾ ಮತ್ತು ಕನ್ಸ್ಯೂಮರ್ ಡುರೇಬಲ್ಸ್ ವಲಯದ ಶೇರುಗಳು ಕೊಂಚ ಲಾಭ ಗಳಿಸಿದವು. ಆದರೆ ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 1 ರಷ್ಟು ಇಳಿಕೆಯಾಗಿದೆ.
ಇದಲ್ಲದೆ, ಮುಂಬರುವ ಯುಎಸ್ ಹಣದುಬ್ಬರ ದತ್ತಾಂಶ ಮತ್ತು ಆರ್ಬಿಐ ನ ರೆಪೊ ದರ ನಿರ್ಧಾರಗಳು ದಲಾಲ್ ಸ್ಟ್ರೀಟ್ನಲ್ಲಿ ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿವೆ. ಮಾರುಕಟ್ಟೆಗಳು ಮತ್ತೆ ಏರಿಕೆಯತ್ತ ಸಾಗಲಿವೆಯೇ ಎಂಬುದು ಇನ್ನೂ ಬರಬೇಕಿರುವ ಕಂಪನಿಗಳ ಪ್ರಥಮ ತ್ರೈಮಾಸಿಕದ ಫಲಿತಾಂಶಗಳನ್ನು ಹೆಚ್ಚಾಗಿ ಅವಲಂಬಿಸಿದೆ. ಹಣಕಾಸು ನೀತಿ ಸಮಿತಿಯ (ಎಂಪಿಸಿ) ನಿರ್ಧಾರವನ್ನು ಆಗಸ್ಟ್ 10 ರ ಗುರುವಾರ ಆರ್ಬಿಐ ಗವರ್ನರ್ ದಾಸ್ ಪ್ರಕಟಿಸಲಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕೆಳಮಟ್ಟದಲ್ಲಿ ಕೊನೆಗೊಂಡರೆ, ಟೋಕಿಯೊ ಏರಿಕೆಯಲ್ಲಿ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಇಳಿಕೆಯಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕವಾಗಿ ಕೊನೆಗೊಂಡವು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 1.38 ರಷ್ಟು ಇಳಿದು ಬ್ಯಾರೆಲ್ಗೆ 84.16 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು