ನವದೆಹಲಿ : ದೇಶದಲ್ಲಿ ಈಗಾಗಲೇ 5ಜಿ ಬಳಕೆಗೆ ಚಾಲನೆ ನೀಡಲಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಭಾರತ್ 6ಜಿ ವಿಷನ್ ಡ್ಯಾಕ್ಯುಮೆಂಟ್ ಮತ್ತು 6ಜಿ ಸಂಶೋಧನೆ ಮತ್ತು ಅಭಿವೃದ್ಧಿ (6ಜಿ ರಿಸರ್ಚ್ ಆ್ಯಂಡ್ ಡೆವೆಲಪ್ಮೆಂಟ್) ಘಟಕದ ಟೆಸ್ಟ್ ಬೆಡ್ ಅನಾವರಣ ಮಾಡಿದ್ದಾರೆ. 6ಜಿ ವಿಷನ್ ಡಾಕ್ಯುಮೆಂಟ್ ಮತ್ತು 6ಜಿ ಟೆಸ್ಟ್ ಬೆಡ್ ದೇಶದಲ್ಲಿ ನಾವೀನ್ಯತೆಗೆ, ಸಾಮರ್ಥ್ಯ ವರ್ಧನೆ ಮತ್ತು ವೇಗವಾಗಿ ತಂತ್ರಜ್ಞಾನ ಅಳವಡಿಕೆಗೆ ಬೇಕಾದ ಪೂರಕ ವಾತಾವರಣ ಒದಗಿಸುತ್ತದೆ ಎಂದು ಹೇಳಲಾಗಿದೆ.
ಇಲ್ಲಿನ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಇಂಟರ್‌ನ್ಯಾಶನಲ್ ಟೆಲಿ ಕಮ್ಯುನಿಕೇಶನ್ ಯೂನಿಯನ್ (ಐಟಿಯು)ನ ನೂತನ ಪ್ರಾದೇಶಿಕ ಕಚೇರಿ ಮತ್ತು ಇನ್ನೋವೇಷನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಮೋದಿ, 6ಜಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಟೆಸ್ಟ್ ಬೆಡ್‌ನ ಸಹಾಯದಿಂದ ದೇಶದಲ್ಲಿ ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಭಾರತವು 4ಜಿ ತಂತ್ರಜ್ಞಾನಕ್ಕಿಂತ ಮೊದಲು ಟೆಲಿಕಾಂ ತಂತ್ರಜ್ಞಾನ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ ಇದೀಗ ಭಾರತವು ವಿಶ್ವದಲ್ಲಿಯೇ ಟೆಲಿಕಾಂ ತಂತ್ರಜ್ಞಾನದ ಅತಿದೊಡ್ಡ ರಫ್ತುದಾರನಾಗುವತ್ತ ದಾಪುಗಾಲು ಇಡುತ್ತಿದೆ. 5ಜಿ ತಂತ್ರಜ್ಞಾನದ ಮೂಲಕ ಇಡೀ ಜಗತ್ತಿನ ಕೆಲಸದ ಹವ್ಯಾಸವನ್ನು ಬದಲಾಯಿಸುವಲ್ಲಿ ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
5ಜಿ ಅಪ್ಲಿಕೇಶನ್ಸ್ ಅಭಿವೃದ್ಧಿಗೆ ಸಹಕಾರಿ: "ಈ 100 ಹೊಸ ಲ್ಯಾಬ್ಗಳು ಭಾರತದ ಅಗತ್ಯಗಳಿಗೆ ಅನುಗುಣವಾಗಿ 5ಜಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ಇಂದು ಭಾರತವು 5ಜಿ ಸ್ಮಾರ್ಟ್ ತರಗತಿಗಳು, ಕೃಷಿ, ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ಸ್ ಮತ್ತು ಆರೋಗ್ಯ ಪ್ರತಿಯೊಂದು ದಿಕ್ಕಿನಲ್ಲೂ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಭಾರತದ 5G ಮಾನದಂಡಗಳು ಜಾಗತಿಕ 5G ವ್ಯವಸ್ಥೆಗಳ ಭಾಗವಾಗಿದೆ. ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿ ನಿಟ್ಟಿನಲ್ಲಿ ಭಾರತವು ಐಟಿಯುನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ನೂತನ ಭಾರತೀಯ ಐಟಿಯು ಪ್ರದೇಶ ಕಚೇರಿಯು 6ಜಿ ಗಾಗಿ ಪೂರಕ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದರು.
ಉದ್ಯಮಗಳ ಶ್ಲಾಘನೆ: ದೇಶದಲ್ಲಿ 6ಜಿ ಟೆಸ್ಟ್ ಬೆಡ್ ಸ್ಥಾಪಿಸಿರುವ ಪ್ರಧಾನಿ ಮೋದಿ ಅವರ ಕ್ರಮವನ್ನು ಉದ್ಯಮಗಳು ಶ್ಲಾಘಿಸಿದೆ. 6ಜಿ ಮೂಲಕ ಕಡಿಮೆ ದರದೊಂದಿಗೆ ಹೆಚ್ಚಿನ ವೇಗದ ಸೇವೆಯನ್ನು ಹೊಂದಬಹುದಾಗಿದೆ. 2030ರ ವೇಳೆಗೆ ಸುಮಾರು 10 ಕೋಟಿ ಸಕ್ರಿಯ 6ಜಿ ಸಾಧನಗಳನ್ನು ಹೊಂದುವ ಗುರಿ ಇರುವುದಾಗಿ ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಟಿಎಸ್ಎಸ್ಸಿ) ಸಿಇಒ ಅರವಿಂದ್ ಬಾಲಿ ತಿಳಿಸಿದ್ದಾರೆ.
ಅಲ್ಲದೇ ಇದು ಶೈಕ್ಷಣಿಕ ಸಂಶೋಧನೆ, ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ವೇದಿಕೆಯನ್ನು ಒದಗಿಸುವ ಕಾರ್ಯ ಮಾಡುತ್ತದೆ. ಜೊತೆಗೆ, 6ಜಿ ಟೆಸ್ಟ್ ಬೆಡ್ ನುರಿತ ಮತ್ತು ನವೀನ ಉದ್ಯೋಗಿಗಳ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 2022ರ ಆಗಸ್ಟ್‌ನಲ್ಲಿ 6ಜಿ ತಂತ್ರಜ್ಞಾನವನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ : ರಮೇಶ್ ಚೌಹಾನ್ ಏಕೈಕ ಪುತ್ರಿ ಜಯಂತಿ ಈಗ ಬಿಸ್ಲೇರಿ ಕಂಪನಿ ಉತ್ತರಾಧಿಕಾರಿ..