ಬೆಂಗಳೂರು: ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್ ಸ್ಪೀಕರ್ ನೋಟಿಫಿಕೇಶನ್ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್ನಲ್ಲಿ ಈ ನೋಟಿಫಿಕೇಶನ್ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಇದನ್ನು ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ.
ಈ ಸ್ಮಾರ್ಟ್ ಸ್ಪೀಕರ್ ಇನ್ಮುಂದೆ ಹಣದ ವಾಹಿವಾಟಿನ ಮಾಹಿತಿಯನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಮರಾಠಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಇದನ್ನು ಬಿಡುಗಡೆ ಮಾಡುವ ಸಿದ್ಧತೆಯನ್ನು ಕಂಪನಿ ನಡೆಸಿದೆ.
ವರ್ನಾಕ್ಯುಲರ್(ಭಾಷೆ) ವಾಯ್ಸ್ ನೋಟಿಫಿಕೇಶನ್ ಮೂಲಕ ಇದೀಗ ವ್ಯಾಪಾರಿಗಳು ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ಅವರು ಪೇಮೆಂಟ್ ಕುರಿತಾದ ವಿವರಗಳ ಧೃಢೀಕರಣಕ್ಕೆ ಗ್ರಾಹಕರ ಸ್ಕ್ರೀನ್ ನಲ್ಲಿ ನೋಡುವ ಅವಶ್ಯಕತೆ ಎದುರಾಗುವುದಿಲ್ಲ. ಜೊತೆಗೆ ತಮ್ಮ ಭಾಷೆಗಳಲ್ಲೇ ಇದನ್ನು ಕೇಳುವುದರಿಂದ ಅವರಿಗೆ ಮತ್ತಷ್ಟು ಖಾತ್ರಿ ದೊರಕಲಿದೆ ಎಂದು ಸಂಸ್ಥೆ ತಿಳಿಸಿದೆ.
ಸದ್ಯ ಈ ಪೋನ್ ಪೇ ಸ್ಮಾರ್ಟ್ ಸ್ಪೀಕರ್ ಭಾರತದ ಉದ್ಯಮದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದು, ವ್ಯಾಪಾರಿಗಳು ಶೇ 90ರರಷ್ಟು ಬಳಕೆ ಮಾಡುತ್ತಿದ್ದಾರೆ. ಇದೀಗ ಭಾಷೆಗಳ ಸೌಲಭ್ಯ ಮತ್ತಷ್ಟು ವ್ಯಾಪಾರಿಗಳನ್ನು ಸೆಳೆಯಲಿದೆ. ವ್ಯಾಪಾರಿಗಳು ತಮ್ಮ ಬ್ಯುಸಿನೆಸ್ ಆಪ್ ಮೂಲಕ ಯಾವುದೇ ಹೆಚ್ಚುವರಿ ಪಾವತಿ ಇಲ್ಲದೇ ಈ ಭಾಷಾ ಸೌಲಭ್ಯದ ಸೆಟ್ಟಿಂಗ್ ಪಡೆಯಬಹುದಾಗಿದೆ.
ಹೀಗೆ ಸೆಟ್ ಮಾಡಿ: ಇನ್ನು ವ್ಯಾಪಾರಿಗಳು ಹೇಗೆ ಈ ಪ್ರಾದೇಶಿಕ ಭಾಷಾ ಆಯ್ಕೆಯನ್ನು ಈ ಫೋನ್ ಪೇ ಸ್ಮಾರ್ಟ್ ಸ್ಪೀಕರ್ನಲ್ಲಿ ಪಡೆಯಬಹುದು ಎಂಬುದರ ಕುರಿತು ಸುಲಭ ಸೂಚನೆಗಳು ಇಲ್ಲಿವೆ.
ವ್ಯಾಪಾರಿಗಳು ತಮ್ಮ ಫೋನ್ಪೇ ಬ್ಯುಸಿನೆಸ್ ಆ್ಯಪ್ ಅನ್ನು ತೆರೆಯಬೇಕು, ಇಲ್ಲಿ ಹೋಂ ಸ್ಕ್ರೀನ್ನ ಸ್ಮಾರ್ಟ್ ಸ್ಪೀಕರ್ ಸೆಕ್ಷನ್ಗೆ ಭೇಟಿ ನೀಡಿ, ಅಲ್ಲಿ ಲಾಕ್ವೆಜ್ ಬಾರ್ನಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಭಾಷೆ ಸ್ಮಾರ್ಟ್ ಸ್ಪೀಕರ್ ಸಾಧನದಲ್ಲಿ ಡೌನ್ಲೋಡ್ ಆಗಲಿದ್ದು, ಈ ಸಾಧನವೂ ಹೊಸ ಅಪ್ಡೇಟ್ ಭಾಷೆಯೊಂದಿಗೆ ರೀಬೂಟ್ ಆಗುತ್ತದೆ.
ಕಳೆದ ವರ್ಷ ಬಿಡುಗಡೆ: ಫೋನ್ ಪೇ ವಹಿವಾಟಿನಿಂದ ವ್ಯಾಪಾರಿಗಳು ಪ್ರತಿ ಬಾರಿ ಗ್ರಾಹಕರ ದೃಢೀಕರಣಕ್ಕೆ ಅವರ ಮೊಬೈಲ್ ಸ್ಕ್ರೀನ್ ನೋಡುವ ತೊಂದರೆ ತಪ್ಪಿಸುವ ಉದ್ದೇಶದಿಂದ ಕಳೆದ ವರ್ಷ ಫೋನ್ ಪೇ ಈ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿತ್ತು. ಸುಲಭವಾಗಿ ಎಲ್ಲಿಗೆ ಬೇಕಾದಲ್ಲಿ ಕೊಂಡೊಯ್ಯಬಹುದಾದ ಈ ಸಾಧನದಲ್ಲಿ ಅತ್ಯುತ್ತಮ ಬ್ಯಾಟರಿ ಮತ್ತು ಉತ್ತಮ ಆಡಿಯೋ ಕ್ಲಾರಿಟಿ ಹೊಂದಿದ್ದು, ಜನಪ್ರಿಯಗೊಂಡಿತು. ವ್ಯಾಪಾರಿಗಳ ಹಣದ ವಹಿವಾಟಿನ ಕುರಿತು ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿತ್ತು.
ಇನ್ನು, ಈ ಸ್ಮಾರ್ಟ್ ಸ್ಪೀಕರ್ ಬ್ಯಾಟರಿ ಲೈಫ್ ಒಮ್ಮೆ ಚಾರ್ಜ್ ಮಾಡಿದರೆ ಸಾಕು ನಾಲ್ಕು ದಿನಗಳ ಕಾಲ ಬರುತ್ತದೆ ಜೊತೆಗೆ ಡಾಟಾ ಕನೆಕ್ಟಿವಿಟಿ ಕೂಡ ಹೊಂದಿದೆ. ಕಡಿಮೆ ಬ್ಯಾಟರಿಯಲ್ಲೂ ಇದು ಆಡಿಯೋ ಅಲರ್ಟ್ ನೀಡುವ ಜೊತೆಗೆ ಕಡೆಯ ವಹಿವಾಟಿನ ಮಾಹಿತಿಯನ್ನು ರಿಪ್ಲೈ ಬಟನ್ ಮೂಲಕ ಪಡೆಯಬಹುದಾಗಿದೆ.
ಬೆಂಗಳೂರು ಮೂಲದ ಫೋನ್ ಪೇ 2015ರಲ್ಲಿ ಸ್ಥಾಪಿತವಾಗಿದ್ದು, ಅತ್ಯಂತ ಮೆಚ್ಚಿನ ಡಿಜಿಟಲ್ ಪೇಮೆಂಟ್ ತಾಣವಾಗಿದೆ. 47 ಕೋಟಿ ಮಂದಿ ಬಳಕೆದಾರರು ಇದಕ್ಕೆ ನೋಂದಣಿ ಆಗಿದ್ದು, ಭಾರತದಲ್ಲಿ ನಾಲ್ವರಲ್ಲಿ ಒಬ್ಬರು ಫೋನ್ ಪೇ ಅನ್ನು ಬಳಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು