ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪ್ಲಾಟ್ಫಾರ್ಮ್ ವಹಿವಾಟುಗಳು 2023 ರಲ್ಲಿ 100 ಬಿಲಿಯನ್ ಗಡಿಯನ್ನು ದಾಟಿ ಸುಮಾರು 118 ಬಿಲಿಯನ್ಗೆ ತಲುಪಿದೆ. ಇದು 2022 ರಲ್ಲಿ ದಾಖಲಾದ 74 ಬಿಲಿಯನ್ ವಹಿವಾಟುಗಳಿಗೆ ಹೋಲಿಸಿದರೆ ಶೇಕಡಾ 60 ರಷ್ಟು ಹೆಚ್ಚಾಗಿದೆ. 2023 ರಲ್ಲಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯವು ಸುಮಾರು 182 ಲಕ್ಷ ಕೋಟಿ ರೂ.ಗಳಷ್ಟಿದ್ದು, 2022 ರಲ್ಲಿ 126 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 44 ರಷ್ಟು ಹೆಚ್ಚಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಹಂಚಿಕೊಂಡ ಅಂಕಿ ಅಂಶಗಳು ತಿಳಿಸಿವೆ.
ಡಿಸೆಂಬರ್ನಲ್ಲಿ ಯುಪಿಐ ಒಟ್ಟು 18.23 ಲಕ್ಷ ಕೋಟಿ ರೂ. ಮೊತ್ತದ 12 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ. ಎನ್ಪಿಸಿಐ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ನಲ್ಲಿ ಪ್ರತಿದಿನ ಯುಪಿಐ ವಹಿವಾಟುಗಳ ಸಂಖ್ಯೆ 387 ಮಿಲಿಯನ್ಗಿಂತ ಹೆಚ್ಚಾಗಿದೆ. ಏತನ್ಮಧ್ಯೆ, ಎನ್ಪಿಸಿಐ ಈಕ್ವಿಟಿ ಕ್ಯಾಶ್ ವಿಭಾಗಕ್ಕಾಗಿ ತನ್ನ ಬೀಟಾ ಹಂತದ "ಯುಪಿಐ ಫಾರ್ ಸೆಕೆಂಡರಿ ಮಾರ್ಕೆಟ್" ಅನ್ನು ಜನವರಿ 1 ರಿಂದ ಪ್ರಾರಂಭಿಸುವುದಾಗಿ ಘೋಷಿಸಿದೆ.
ಕ್ಲಿಯರಿಂಗ್ ಕಾರ್ಪೊರೇಷನ್ ಗಳು, ಸ್ಟಾಕ್ ಎಕ್ಸ್ ಚೇಂಜ್ ಗಳು, ಡಿಪಾಸಿಟರಿಗಳು, ಸ್ಟಾಕ್ ಬ್ರೋಕರ್ಗಳು, ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್ ಪೂರೈಕೆದಾರರು ಸೇರಿದಂತೆ ಪ್ರಮುಖ ಮಧ್ಯಸ್ಥಗಾರರ ಸಹಯೋಗದ ಬೆಂಬಲದೊಂದಿಗೆ 'ಯುಪಿಐ ಫಾರ್ ಸೆಕೆಂಡರಿ ಮಾರ್ಕೆಟ್' ಬಿಡುಗಡೆ ಮುಂದಿನ ವಾರ ಪ್ರಾರಂಭವಾಗಲಿದೆ. ಆರಂಭದಲ್ಲಿ, ಈ ಕಾರ್ಯವು ಸೀಮಿತ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಎನ್ಪಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರಾಯೋಗಿಕ ಹಂತದಲ್ಲಿ, ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಬ್ಲಾಕ್ ಮಾಡಬಹುದು ಹಾಗೂ ಇದನ್ನು ಸೆಟ್ಲಮೆಂಟ್ ಸಮಯದಲ್ಲಿ ಟ್ರೇಡ್ ಕನ್ಫರ್ಮೇಶನ್ ನಂತರ ಮಾತ್ರ ಕ್ಲಿಯರಿಂಗ್ ನಿಗಮಗಳು ಡೆಬಿಟ್ ಮಾಡುತ್ತವೆ.
ನಿಷ್ಕ್ರಿಯ ಯುಪಿಐ ಐಡಿ ರದ್ದು: ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ರದ್ದುಗೊಳಿಸುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬ್ಯಾಂಕುಗಳು ಮತ್ತು ಮೊಬೈಲ್ ಪಾವತಿ ಅಪ್ಲಿಕೇಶನ್ಗಳಾದ ಗೂಗಲ್ ಪೇ, ಪೇಟಿಎಂ ಮತ್ತು ಫೋನ್ಪೆಗೆ ಸೂಚಿಸಿದೆ.
ಆಸ್ಪತ್ರೆ, ಶಾಲೆಗಳಿಗೆ ಯುಪಿಐ ವಹಿವಾಟು ಮಿತಿ ಹೆಚ್ಚಳ: ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾಡುವ ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ಹಿಂದಿನ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆನ್ಲೈನ್ ಪಾವತಿಗಳಿಗಾಗಿ ಯುಪಿಐ ಅಳವಡಿಕೆಯನ್ನು ಹೆಚ್ಚಿಸಲು ಆರ್ಬಿಐ ಈ ಕ್ರಮ ತೆಗೆದುಕೊಂಡಿದೆ.
ಇದನ್ನೂ ಓದಿ : ಸ್ಟಾರ್ಲಿಂಕ್ ನಿರ್ವಹಣೆಯ ಮಾತುಕತೆ ನಡೆಸಿಲ್ಲ ಎಂದ ವೊಡಾಫೋನ್ ಐಡಿಯಾ; ಷೇರು ಮೌಲ್ಯ ಕುಸಿತ