ನಾಸಿಕ್ (ಮಹಾರಾಷ್ಟ್ರ) : ಕಳೆದ 13 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಇಲ್ಲಿನ ಈರುಳ್ಳಿ ಸಗಟು ವ್ಯಾಪಾರಿಗಳು ಸೋಮವಾರ ತಡರಾತ್ರಿ ಕೊನೆಗೂ ಹಿಂಪಡೆದಿದ್ದಾರೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಿರುವ ಈ ಸಮಯದಲ್ಲಿ ಮುಷ್ಕರ ಕೊನೆಗೊಂಡಿದ್ದು ಸಮಾಧಾನದ ವಿಷಯವಾಗಿದೆ. ಮಂಗಳವಾರ ಬೆಳಗ್ಗೆ ಈರುಳ್ಳಿ ತುಂಬಿದ ಲಾರಿಗಳು ಇಲ್ಲಿನ ಎಪಿಎಂಸಿಗೆ ಆಗಮಿಸಿದ್ದು, ಹರಾಜು ಪುನಾರಂಭಗೊಂಡಿದೆ.
ಮುಷ್ಕರ ಹಿಂತೆಗೆದುಕೊಂಡ ಸುದ್ದಿ ಹರಡುತ್ತಿದ್ದಂತೆಯೇ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಯಾರ್ಡ್ ಲಾಸಲ್ಗಾಂವ್ ಸೇರಿದಂತೆ ಇತರ ಮಂಡಿಗಳಿಗೆ ಈರುಳ್ಳಿ ತುಂಬಿದ ಸುಮಾರು ನೂರು ಟ್ರಕ್ಗಳು ಆಗಮಿಸಿವೆ. ಅಂದಾಜು 75,000-80,000 ಕ್ವಿಂಟಾಲ್ ಈರುಳ್ಳಿಯನ್ನು ಇಂದು ಹರಾಜು ಮಾಡುವ ಸಾಧ್ಯತೆಯಿದೆ. ಇದು ಈ ಎಪಿಎಂಸಿಗಳಲ್ಲಿ ದೈನಂದಿನ ವ್ಯಾಪಾರದ ಸಾಮಾನ್ಯ ಕೋಟಾದ ಅರ್ಧದಷ್ಟಾಗಿದೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ನಾಸಿಕ್ ಉಸ್ತುವಾರಿ ಸಚಿವರು ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ನಂತರ ಮುಷ್ಕರ ಕೊನೆಗೊಂಡಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಕೊರತೆ ಮತ್ತು ಬೆಲೆ ಏರಿಕೆಯ ಆತಂಕದ ಮಧ್ಯೆ, 13 ದಿನಗಳ ಮುಷ್ಕರದಿಂದ ರೈತರಿಗೆ ತೀವ್ರವಾಗಿ ಹಾನಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಾಸಿಕ್ ಜಿಲ್ಲಾ ಈರುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಖಂಡು ಡಿಯೋರ್ ಹೇಳಿದ್ದಾರೆ.
"ಆದಾಗ್ಯೂ, ನಮ್ಮ ಬೇಡಿಕೆಗಳನ್ನು ಪರಿಗಣಿಸಲು ನಾವು ಸರ್ಕಾರಕ್ಕೆ ಒಂದು ತಿಂಗಳ ಸಮಯ ನೀಡಿದ್ದೇವೆ ಮತ್ತು ಇವುಗಳನ್ನು ಈಡೇರಿಸದಿದ್ದರೆ ನಾವು ಮತ್ತೆ ಮುಷ್ಕರ ಪ್ರಾರಂಭಿಸಲಿದ್ದೇವೆ" ಎಂದು ಡಿಯೋರ್ ಎಚ್ಚರಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈರುಳ್ಳಿ ವ್ಯಾಪಾರಿಗಳು ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರದೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಆದರೆ, ಯಾವುದೇ ಸೌಹಾರ್ದಯುತ ಫಲಿತಾಂಶ ಸಿಕ್ಕಿರಲಿಲ್ಲ.
ಜೂನ್-ಆಗಸ್ಟ್ ನಡುವೆ ಟೊಮ್ಯಾಟೊ ಬೆಲೆ ಕೆಜಿಗೆ 200 ರೂಪಾಯಿ ಮೀರಿತ್ತು. ಅದಾದ ನಂತರ ಈರುಳ್ಳು ಬೆಲೆ ಹೆಚ್ಚಾಗುವ ಆತಂಕ ಉಂಟಾಗಿತ್ತು. ಈರುಳ್ಳಿ ರಫ್ತಿನ ಮೇಲೆ ವಿಧಿಸಲಾದ ಶೇಕಡಾ 40 ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ಒಪ್ಪದ ಕಾರಣ ಸೆಪ್ಟೆಂಬರ್ 21 ರಂದು ಅನಿರ್ದಿಷ್ಟ ಮುಷ್ಕರ ಆರಂಭಿಸಲಾಗಿತ್ತು. ಈ ಸುಂಕದಿಂದ ತಮ್ಮ ಆದಾಯದಲ್ಲಿ ಭಾರಿ ನಷ್ಟವಾಗುವುದಲ್ಲದೆ ರೈತರಿಗೆ ನ್ಯಾಯಯುತ ಬೆಲೆ ನೀಡಲು ಸಾಧ್ಯವಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಕೊಚ್ಚಿ ಮತ್ತು ದೋಹಾ ನಡುವೆ ಅ.23 ರಿಂದ ಏರ್ ಇಂಡಿಯಾ ನೇರ ವಿಮಾನಯಾನ ಆರಂಭ