ನವದೆಹಲಿ: ಉದ್ಯೋಗಿಗಳನ್ನು ವಜಾಗೊಳಿಸುವಿಕೆ ಮತ್ತು ತೀವ್ರ ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳುತ್ತಿರುವ ಟ್ವಿಟರ್, ದೆಹಲಿ ಮತ್ತು ಮುಂಬೈನಲ್ಲಿ ತನ್ನ ಕಚೇರಿಗಳನ್ನು ಮುಚ್ಚಿದೆ ಎಂದು ತಿಳಿದು ಬಂದಿದೆ. ಈ ಕಚೇರಿಗಳ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಟ್ವಿಟರ್ನ ಬೆಂಗಳೂರು ಕಚೇರಿಯು ಹೆಚ್ಚಾಗಿ ಎಂಜಿನಿಯರಿಂಗ್ ಸ್ಟಾಫ್ ಹೊಂದಿದ್ದು, ಇದು ಎಂದಿನಂತೆ ಕಾರ್ಯಾಚರಣೆ ನಡೆಸಲಿದೆ ಎನ್ನಲಾಗಿದೆ.
ದೆಹಲಿ ಮತ್ತು ಮುಂಬೈಗಳಲ್ಲಿನ ಟ್ವಿಟರ್ ಕಚೇರಿಗಳನ್ನು ವಾರಗಳ ಹಿಂದೆಯೇ ಬಂದ್ ಮಾಡಲಾಗಿದ್ದು, ಉಳಿದ ಕೆಲವೇ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಟ್ವಿಟರ್ನ ಈ ಕ್ರಮದಿಂದ ಎಷ್ಟು ಉದ್ಯೋಗಿಗಳ ಮೇಲೆ ಪರಿಣಾಮವಾಗಿದೆ ಎಂಬುದು ಗೊತ್ತಾಗಿಲ್ಲ. ಈ ಕುರಿತು ಮಾಹಿತಿ ಕೋರಿ ಟ್ವಿಟರ್‌ಗೆ ಕಳುಹಿಸಲಾದ ಈಮೇಲ್ಗೆ ಯಾವುದೇ ಉತ್ತರ ಬಂದಿಲ್ಲ. ಕಳೆದ ವರ್ಷ ಬಿಲಿಯನೇರ್ ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು 44 ಶತಕೋಟಿ ಯುಎಸ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡ ನಂತರ, ಟ್ವಿಟರ್ ಜಾಗತಿಕವಾಗಿ ಬೃಹತ್ ವೆಚ್ಚ ಕಡಿತದ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದರಿಂದ ಭಾರತದ ಪ್ರಮುಖ ಸ್ಥಳಗಳಲ್ಲಿನ ಎರಡು ಕಚೇರಿಗಳನ್ನು ಮುಚ್ಚಲಾಗಿದೆ.
ಪ್ರಪಂಚದಾದ್ಯಂತ ಕಂಪನಿಯ ಕಚೇರಿಗಳಲ್ಲಿ 7,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಈ ಸಂಖ್ಯೆ ಈಗ 2,300 ಸಕ್ರಿಯ ಉದ್ಯೋಗಿಗಳಿಗೆ ಸೀಮಿತವಾಗಿದೆ. ಕಳೆದ ವರ್ಷ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್ಒ ಮತ್ತು ಇತರ ಅನೇಕ ಉನ್ನತ ಶ್ರೇಣಿಯ ನಾಯಕರನ್ನು ವಜಾಗೊಳಿಸುವುದರೊಂದಿಗೆ ಉದ್ಯೋಗಿಗಳ ಕಡಿತದ ಪರ್ವ ಪ್ರಾರಂಭವಾಗಿತ್ತು. ಇದರ ಮುಂದುವರಿದ ಭಾಗವಾಗಿ ಟ್ವಿಟರ್ ಭಾರತದಲ್ಲಿಯೂ ತನ್ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇಂಜಿನಿಯರಿಂಗ್, ಮಾರಾಟ ಮತ್ತು ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಿದ್ದರಿಂದ ಈಗ ಕೇವಲ ಬೆರಳೆಣಿಕೆಯಷ್ಟು ಉದ್ಯೋಗಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಯುಎಸ್ ಮೂಲದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಟ್ವಿಟರ್, ನವೆಂಬರ್ ಆರಂಭದಲ್ಲಿ ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಇಮೇಲ್‌ನಲ್ಲಿ, ಟ್ವಿಟ್ಟರ್ ಅನ್ನು ಸುಸ್ಥಿತಿಯಲ್ಲಿ ಇರಿಸುವ ಪ್ರಯತ್ನದಲ್ಲಿ, ಜಾಗತಿಕವಾಗಿ ನಮ್ಮ ಉದ್ಯೋಗಿಗಳನ್ನು ಕಡಿತ ಮಾಡುವ ಕಠೋರ ಕ್ರಮಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಹೇಳಿದೆ.
ಬಹುಶಃ ಈ ವರ್ಷದ ಅಂತ್ಯದ ವೇಳೆಗೆ ಟ್ವಿಟರ್‌ಗೆ ಹೊಸ CEO ಅನ್ನು ಹುಡುಕುವ ನಿರೀಕ್ಷೆಯಿದೆ ಎಂದು ಎಲೋನ್ ಮಸ್ಕ್ ಬಹಿರಂಗಪಡಿಸಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಆಡಳಿತ ಶೃಂಗಸಭೆಯಲ್ಲಿ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಸ್ಕ್ ಹೇಳಿಕೆ ನೀಡಿದ್ದು, ಟ್ವಿಟರ್ ಅನ್ನು ಸೂಕ್ತವಾಗಿ ನಿರ್ವಹಿಸುವುದು ತಮಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದಿದ್ದಾರೆ. ಹೊಸ ಸಿಇಒ ನೇಮಕ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಂಸ್ಥೆಯನ್ನು ಸ್ಥಿರಗೊಳಿಸಬೇಕು ಮತ್ತು ಅದು ಆರ್ಥಿಕವಾಗಿ ಸದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳ ಖಚಿತಪಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಕಂಪನಿಯನ್ನು ನಡೆಸಲು ಬೇರೊಬ್ಬರನ್ನು ಹುಡುಕಲು ಈ ವರ್ಷದ ಅಂತ್ಯದ ಸಮಯ ಉತ್ತಮ ಸಮಯವಾಗಿರುತ್ತದೆ ಎಂದರು. ಟ್ವಿಟರ್ ಈಗಲೂ ಒಂದು ರೀತಿಯ ರಿವರ್ಸ್ ಸ್ಟಾರ್ಟಪ್ ರೀತಿಯಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ: ಚಿನ್ನದ ಬಣ್ಣದ ಬ್ಯಾಡ್ಜ್‌ಗಳಿಗಾಗಿ ತಿಂಗಳಿಗೆ $1,000 ಶುಲ್ಕ ವಿಧಿಸಿದ ಟ್ವಿಟರ್