ವಾಷಿಂಗ್ಟನ್: ಆರ್ಥಿಕ ಹಿಂಜರಿತದಿಂದ ಅಮೆರಿಕದ ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ದಿನವೊಂದಕ್ಕೆ 1600 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಗೆ ಇದೀಗ ಮೈಕ್ರೋಸಾಫ್ಟ್ ಕೂಡ ಸೇರಿಕೊಂಡಿದೆ. ಟೆಕ್ ದೈತ್ಯ ಸಂಸ್ಥೆಯು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮೈಕ್ರೋಸಾಫ್ಟ್ ತಮ್ಮ ಸಂಸ್ಥೆಯಲ್ಲಿ ಸರಿಸುಮಾರು ಶೇ 5ರಷ್ಟು ಅಥವಾ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.
ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಬುಧವಾರ ಸಾವಿರಾರು ಜನರು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಹೊಸ ಉದ್ಯೋಗ ವಜಾ ಪ್ರಕರಣವಿದು. ಈಗಾಗಲೇ ಅಮೆಜಾನ್, ಮೆಟಾದಂತಹ ಸಂಸ್ಥೆಗಳು ಬೇಡಿಕೆ ಕುಗ್ಗುವಿಕೆ ಮತ್ತು ಜಾಗತಿಕ ಆರ್ಥಿಕತೆ ಕುಸಿತದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಅನಿವಾರ್ಯವಾಗಿದೆ ಎಂದು ಪ್ರಕಟಿಸಿ, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು.
ಮಾರುಕಟ್ಟೆ ಕುಸಿತ: ಜೂನ್ 30ರ ವರದಿ ಅನುಸಾರ, ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ 221,000 ಮಂದಿ ಪೂರ್ಣ ಪ್ರಮಾಣದ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅಮೆರಿಕದಲ್ಲಿ 122,000 ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, 99,000 ಮಂದಿ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಿಗಳಾಗಿದ್ದಾರೆ. ಮೈಕ್ರೋಸಾಫ್ಟ್ ತಮ್ಮ ಕ್ಲೌಡ್ ಯೂನಿಟ್ ಅಜುರ್ ಬೆಳವಣಿಗೆ ನಿರ್ವಹಣೆ ಒತ್ತಡದಲ್ಲಿ ಸಿಲುಕಿದೆ. ಅಲ್ಲದೇ, ಮಾರುಕಟ್ಟೆಯ ಕ್ವಾರ್ಟರ್ನಲ್ಲಿ ಕುಸಿತದ ನಂತರ ವಿಂಡೋಸ್ ಮತ್ತು ಸಾಧನಗಳ ಮಾರಾಟ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಎನ್ನಲಾಗಿದೆ.
ರಜೆ ನೀತಿ ಜಾರಿಗೆ ತಂದಿದ್ದ ಸಂಸ್ಥೆ: ಕಳೆದ ಜುಲೈನಲ್ಲಿ ಸಂಸ್ಥೆ, ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ತೆಗೆದು ಹಾಕುವುದಾಗಿ ತಿಳಿಸಿತ್ತು. ಅಕ್ಟೋಬರ್ನಲ್ಲಿ ಮೈಕ್ರೋಸಾಫ್ಟ್ನ ಹಲವಾರು ವಲಯದಲ್ಲಿ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ಸಂಸ್ಥೆ ವಜಾ ಮಾಡಿತ್ತು ಎಂದು ವರದಿಯಾಗಿತ್ತು. ಮೈಕ್ರೋಸಾಫ್ಟ್ನ ಷೇರುಗಳ ಕ್ವಾರ್ಟಲಿ ವರದಿ ಇದೇ ಜನವರಿ 24ರಂದು ಪ್ರಕಟಗೊಳ್ಳಲಿದೆ. ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತಕ್ಕೆ ಮೈಕ್ರೋಸಾಫ್ಟ್ ಮುಂದಾಗಿದೆ. ಆರ್ಥಿಕತೆಯಲ್ಲಿ ತೀವ್ರ ಸವಾಲು ಎದುರಿಸುತ್ತಿರುವ ಮೈಕ್ರೋಸಾಫ್ಟ್ ಇತ್ತೀಚೆಗಷ್ಟೇ ತನ್ನ ಉದ್ಯೋಗಿಗಳಿಗೆ ಅನಿಯಮಿತ ಕೆಲಸದ ಸಮಯ ನಿಯಮ ಜಾರಿಗೆ ತಂದಿತ್ತು. ಇದರ ಅನುಸಾರ ಸಂಸ್ಥೆಯ ಉದ್ಯೋಗಿಗಳು ಬಳಕೆಯಾಗದ ರಜೆ ಬಾಕಿ ಹೊಂದಿರುವವರು ಏಪ್ರಿಲ್ನಲ್ಲಿ ಒಂದು ಬಾರಿ ಪಾವತಿಯನ್ನು ಪಡೆಯಬಹುದು ಎಂದು ತಿಳಿಸಲಾಗಿತ್ತು.
ಮುಂದಿನ ಎರಡು ವರ್ಷ ಭಾರಿ ಸವಾಲು: ತಂತ್ರಜ್ಞಾನ ವಲಯದಲ್ಲಿ ಮುಂದಿನ ಎರಡು ವರ್ಷದ ಸವಾಲಿನ ಕುರಿತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉದ್ಯೋಗಿಗಳ ವಜಾ ಪ್ರಕ್ರಿಯೆ ಸಂಸ್ಥೆಯಲ್ಲಿ ನಡೆದಿದೆ. ಇತ್ತೀಚೆಗೆ, ಸಿಎನ್ಬಿಸಿ ಸಂದರ್ಶನದಲ್ಲಿ ಮಾತನಾಡಿದ ನಾದೆಲ್ಲಾ, ಮುಂದಿನ ಎರಡು ವರ್ಷ ಬಹು ಸವಾಲಿನ ವರ್ಷವಾಗಿರಲಿದ್ದು, ಟೆಕ್ ಸಂಸ್ಥೆಗಳು ದಕ್ಷವಾಗಿರಬೇಕು ಎಂದು ತಿಳಿಸಿದ್ದರು.
ಇದನ್ನೂ ಓದಿ: ಡಬ್ಲ್ಯುಇಎಫ್‌ನ ಟಾಪ್ 30 ಪ್ರಭಾವಿಗಳ ಪಟ್ಟಿಯಲ್ಲಿ ಕೆಟಿಆರ್; ಎಎಪಿ ನಾಯಕ ರಾಘವ್ ಚಡ್ಡಾಗೂ ಸ್ಥಾನ