ನವದೆಹಲಿ: ಕ್ರಿಪ್ಟೋ ಸ್ಟಾರ್ಟಪ್ಗಳು ಈ ವರ್ಷ ಇಲ್ಲಿಯವರೆಗೆ ಜಾಗತಿಕವಾಗಿ 2.1 ಬಿಲಿಯನ್ ಡಾಲರ್ ಸಂಗ್ರಹಿಸಿವೆ ಮತ್ತು ಇದು ಕಳೆದ ವರ್ಷಕ್ಕಿಂತ ಸುಮಾರು 80 ಪ್ರತಿಶತ ಕಡಿಮೆಯಾಗಿದೆ ಎಂದು ವರದಿಯೊಂದು ಸೋಮವಾರ ತೋರಿಸಿದೆ. 2021 ಮತ್ತು 2022 ರಲ್ಲಿ 20 ಬಿಲಿಯನ್ ಡಾಲರ್ಗಿಂತ ಹೆಚ್ಚು ಸ್ಟಾರ್ಟಪ್ ನಿಧಿ ಸಂಗ್ರಹಿಸಿದ ನಂತರ, ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಸ್ಟಾರ್ಟಪ್ ಗಳು ಹೊಸ ಬಂಡವಾಳ ಪಡೆಯುವುದು ಕಷ್ಟಕರವಾಗಿದೆ ಎಂದು AltIndex ಡಾಟ್ com ಪ್ರಸ್ತುತಪಡಿಸಿದ ಅಂಕಿ- ಅಂಶಗಳು ತಿಳಿಸಿವೆ.
2022 ರ ಕ್ರಿಪ್ಟೋ ಕುಸಿತದ ಅವಧಿಗೆ ಹೋಲಿಸಿದರೆ ಇಡೀ ಮಾರುಕಟ್ಟೆ ಗಮನಾರ್ಹವಾಗಿ ಚೇತರಿಸಿಕೊಂಡಿದ್ದರೂ, ಕ್ರಿಪ್ಟೋ ಸ್ಟಾರ್ಟಪ್ ಗಳಲ್ಲಿ ಹೂಡಿಕೆದಾರರ ಆಸಕ್ತಿ ಕಡಿಮೆಯಾಗಿದೆ. "ಇಲ್ಲಿಯವರೆಗೆ 2023ನೇ ವರ್ಷ ಕ್ರಿಪ್ಟೋ ನಿಧಿಸಂಗ್ರಹಕ್ಕೆ ಸವಾಲಿನ ವರ್ಷವಾಗಿದೆ. ಹೂಡಿಕೆದಾರರು ನಿಯಂತ್ರಕ ಕಾನೂನುಗಳು ಮತ್ತು ಅನಿಶ್ಚಿತ ಆರ್ಥಿಕತೆಯ ಪರಿಸ್ಥಿತಿಯಿಂದ ಹೆದರಿ ಹಿಂದೆ ಸರಿಯುತ್ತಿದ್ದಾರೆ" ಎಂದು ವರದಿ ಹೇಳಿದೆ.
ಕ್ರಂಚ್ ಬೇಸ್ ಅಂಕಿ- ಅಂಶಗಳ ಪ್ರಕಾರ, ಕ್ರಿಪ್ಟೋ ಸ್ಟಾರ್ಟಪ್ಗಳು 2019 ರಲ್ಲಿ 1.1 ಬಿಲಿಯನ್ ಡಾಲರ್ ಸಂಗ್ರಹಿಸಿದ್ದವು. ಒಂದು ವರ್ಷದ ನಂತರ, ಈ ಪ್ರಮಾಣ ಸುಮಾರು $ 1.7 ಬಿಲಿಯನ್ಗೆ ಏರಿಕೆಯಾಗಿತ್ತು. ಆದರೂ 2021ರಲ್ಲಿ ಇಡೀ ಕ್ರಿಪ್ಟೋ ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಇದ್ದ ಹೂಡಿಕೆ ಬೆಳವಣಿಗೆಗೆ ಹೋಲಿಸಿದರೆ ಇದು ಅತ್ಯಲ್ಪವಾಗಿದೆ.
ಆ ವರ್ಷವೊಂದರಲ್ಲೇ ಕ್ರಿಪ್ಟೋ ಸ್ಟಾರ್ಟಪ್ ಗಳು 11.1 ಬಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದವು ಅಥವಾ ಹಿಂದಿನ ವರ್ಷಕ್ಕಿಂತ ಇದು ಆರು ಪಟ್ಟು ಹೆಚ್ಚಾಗಿತ್ತು. ಅಂಕಿ ಅಂಶಗಳ ಪ್ರಕಾರ 2022 ರಲ್ಲಿ 10.1 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಬಂದಿದ್ದು, ಇದು ಎರಡು ವರ್ಷಗಳಲ್ಲಿ ಬಂದ ಒಟ್ಟು ನಿಧಿಯ ಹರಿವನ್ನು 20 ಬಿಲಿಯನ್ ಡಾಲರ್ಗೆ ಏರಿಸಿದೆ.
ಈ ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ, ಕ್ರಿಪ್ಟೋ ಸ್ಟಾರ್ಟಪ್ಗಳು 800 ಮಿಲಿಯನ್ ಡಾಲರ್ ಸಂಗ್ರಹಿಸಿವೆ. ಇದು ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕಗಳಿಗೆ ಹೋಲಿಸಿದರೆ ಶೇಕಡಾ 80 ರಷ್ಟು ಕಡಿಮೆಯಾಗಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಒಟ್ಟು ಫಂಡಿಂಗ್ ಮೊತ್ತವು ಮತ್ತೆ 90 ಪ್ರತಿಶತದಷ್ಟು ಇಳಿದು 426 ಮಿಲಿಯನ್ ಡಾಲರ್ಗೆ ತಲುಪಿದೆ.
ಕ್ರಿಪ್ಟೋಕರೆನ್ಸಿ ಒಂದು ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ವಹಿವಾಟುಗಳ ದೃಢೀಕರಣಕ್ಕೆ ಮಧ್ಯವರ್ತಿಯಾಗಿ ಬ್ಯಾಂಕ್ ಬೇಕಿಲ್ಲ. ಇದು ಪೀರ್ - ಟು -ಪೀರ್ ವ್ಯವಸ್ಥೆಯಾಗಿದ್ದು, ಎಲ್ಲಿಯಾದರೂ ಪಾವತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ : ಸಾಲ ತೀರಿಸಿದ ನಂತರ ಕ್ರೆಡಿಟ್ ಸ್ಕೋರ್ ಕುಸಿಯುವುದೇಕೆ? ಇಲ್ಲಿದೆ ಮಾಹಿತಿ