ನವದೆಹಲಿ : ಹಿಂಡೆನ್‌ಬರ್ಗ್ ವರದಿಯ ಬಿಕ್ಕಟ್ಟಿನ ನಂತರ ಕಂಪನಿಯ ಷೇರುದಾರರನ್ನು ಉದ್ದೇಶಿಸಿ ಪ್ರಥಮ ಬಾರಿಗೆ ಮಾತನಾಡಿದ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ವರದಿಯು ಕಂಪನಿಯ ಇಮೇಜ್ ಅನ್ನು ಹಾಳುಮಾಡುವ ಪ್ರಯತ್ನವಾಗಿತ್ತು ಎಂದು ಹೇಳಿದರು. ತಮ್ಮ ಕಂಪನಿ ಸಮೂಹದ ಬ್ಯಾಲೆನ್ಸ್ ಶೀಟ್‌ನ ಬಗ್ಗೆ ಈ ಸಂದರ್ಭದಲ್ಲಿ ಅವರು ಷೇರುದಾರರಿಗೆ ಮಾಹಿತಿ ನೀಡಿದರು.
ಅದಾನಿ ಗುಂಪಿನ ವಾರ್ಷಿಕ ಸಾಮಾನ್ಯ ಸಭೆ (AGM) 2023 ಅನ್ನು ಉದ್ದೇಶಿಸಿ ಗೌತಮ್ ಅದಾನಿ ಮಾತನಾಡಿದರು. ಅದಾನಿ ಎಂಟರ್‌ಪ್ರೈಸಸ್‌ನ ಫಾಲೋ-ಆನ್ ಪಬ್ಲಿಕ್ ಆಫರ್ಗಿಂತ (FPO) ಗಿಂತ ಸ್ವಲ್ಪ ಮೊದಲೇ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತ್ತು ಎಂದು ಅವರು ಹೇಳಿದರು. ಅದಾನಿ ಸಮೂಹವು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ FPO ಅನ್ನು ಪ್ರಾರಂಭಿಸಲು ಯೋಜಿಸುತ್ತಿರುವಾಗ ಬಹಿರಂಗಪಡಿಸಲಾದ ಶಾರ್ಟ್ಸೆಲ್ಲರ್ ಕಂಪನಿಯಾಗಿರುವ ಹಿಂಡೆನ್‌ಬರ್ಗ್ ವರದಿಯು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಮತ್ತು ಸುಳ್ಳು ಆರೋಪಗಳ ಮೂಲಕ ಅಪಖ್ಯಾತಿ ಉಂಟುಮಾಡುವ ಉದ್ದೇಶ ಹೊಂದಿತ್ತು ಎಂದು ಹೇಳಿದರು.
ಎಜಿಎಂ ಸಭೆಯ ಸಮಯದಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಅದಾನಿ ಗುಂಪು ಜಾಗತಿಕ ಹೂಡಿಕೆದಾರರಿಂದ ಹಲವಾರು ಬಿಲಿಯನ್‌ಗಳನ್ನು ಸಂಗ್ರಹಿಸಿದೆ ಮತ್ತು ಯಾವುದೇ ಕ್ರೆಡಿಟ್ ಏಜೆನ್ಸಿ ಅಂತರಾಷ್ಟ್ರೀಯವಾಗಿ ಅದಾನಿ ಗ್ರೂಪ್‌ನ ಯಾವುದೇ ರೇಟಿಂಗ್‌ಗಳನ್ನು ಕಡಿತಗೊಳಿಸಿಲ್ಲ ಎಂಬುದನ್ನು ಒತ್ತಿ ಹೇಳಿದರು.
"ಮುಂದಿನ ದಶಕದೊಳಗೆ, ಭಾರತದ ಜಿಡಿಪಿಗೆ ಪ್ರತಿ 18 ತಿಂಗಳಿಗೊಮ್ಮೆ ಒಂದು ಟ್ರಿಲಿಯನ್ ಡಾಲರ್ ಹೆಚ್ಚಾಗಲು ಪ್ರಾರಂಭವಾಗಲಿದೆ. ಇದು 2050 ರ ವೇಳೆಗೆ 25 ರಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯಲಿದೆ ಮತ್ತು ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣ 40 ಟ್ರಿಲಿಯನ್ ಡಾಲರ್ಗಳಿಗಿಂತ ಹೆಚ್ಚಾಗಲಿದೆ. ಇದು ಪ್ರಸ್ತುತ ಮಟ್ಟದಿಂದ ಸರಿಸುಮಾರು 10 ಪಟ್ಟಿನ ಬೆಳವಣಿಗೆಯಾಗಲಿದೆ. ನಮ್ಮ ದೇಶವು ಈಗ ಅವಕಾಶಗಳ ಅತ್ಯಂತ ಅದ್ಭುತ ತಾಣವಾಗಿದೆ. ಒಳ್ಳೆಯತನದಲ್ಲಿ ನಂಬಿಕೆ ಇಟ್ಟಿರುವ ನಾವು ನಮ್ಮ ಬೆಳವಣಿಗೆಯ ಬಗ್ಗೆ ಭರವಸೆ ಹೊಂದಿದ್ದೇವೆ. ನಮ್ಮ ಟ್ರ್ಯಾಕ್ ರೆಕಾರ್ಡ್ ಸ್ವತಃ ಇದರ ಸಾಕ್ಷಿಯಾಗಿದೆ. ನಿಮ್ಮ ಈ ಕಂಪನಿಯು ಈಗ ಹೊಂದಿರುವ ಎಲ್ಲವನ್ನೂ ಕ್ರೋಢೀಕರಿಸುವುದನ್ನು ಮುಂದುವರಿಸುತ್ತದೆ ಮತ್ತು ತನ್ನ ಪರಿಧಿಯನ್ನು ವಿಸ್ತರಿಸಲಿದೆ" ಎಂದು ಗೌತಮ್ ಅದಾನಿ ಷೇರುದಾರರಲ್ಲಿ ಭರವಸೆ ತುಂಬಿದರು.
ಎಜಿಎಂ ಸಮಯದಲ್ಲಿ ಅದಾನಿ ಕಂಪನಿಯ ಲಾಭ ನಷ್ಟದ ಅಂಕಿ ಸಂಖ್ಯೆಗಳನ್ನು ಸಹ ಹಂಚಿಕೊಂಡರು. ಹಣಕಾಸು ವರ್ಷ 22-23 ರಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿಗಳು ಹಣಕಾಸು ಅಂಕಿ ಅಂಶಗಳು ಹೀಗಿವೆ:
ಒಟ್ಟು EBITDA 36% ರಷ್ಟು ಬೆಳವಣಿಗೆಯಾಗಿ 57,219 ಕೋಟಿ ರೂ.ಗೆ ತಲುಪಿದೆ.
ಒಟ್ಟು ಆದಾಯವು 85% ರಷ್ಟು ಹೆಚ್ಚಾಗಿ 2,62,499 ಕೋಟಿ ರೂ.ಗೆ ತಲುಪಿದೆ.
ಒಟ್ಟು PAT 82% ರಷ್ಟು ಹೆಚ್ಚಾಗಿ 23,509 ಕೋಟಿ ರೂ. ಗೆ ತಲುಪಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಡೆಯುತ್ತಿರುವುದು 'ಕಡು ಭ್ರಷ್ಟರ ಸಭೆ': ಪ್ರಧಾನಿ ಮೋದಿ ವಾಗ್ದಾಳಿ