ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಗಳು ಪೌಂಡ್ಗೆ 12 ಸೆಂಟ್ಸ್ಗಿಂತಲೂ ಜಾಸ್ತಿಯಾಗಿವೆ. ಇದು 12 ವರ್ಷದಲ್ಲೇ ಗರಿಷ್ಠ ಸಕ್ಕರೆ ದರವಾಗಿದೆ. ಭಾರತದಿಂದ ಸಕ್ಕರೆ ರಫ್ತು ತೀವ್ರ ಕಡಿಮೆಯಾಗಿರುವುದು ಮತ್ತು ಬ್ರೆಜಿಲ್ನ ಸರಕು ಸಾಗಣೆ ಸಮಸ್ಯೆಗಳಿಂದ ಸಕ್ಕರೆ ಬೆಲೆ ಗರಿಷ್ಠ ಮಟ್ಟಕ್ಕೇರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಗಳು ನಿರಂತರವಾಗಿ ಅನೇಕ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರುತ್ತಿವೆ ಮತ್ತು ಅಂತಾರಾಷ್ಟ್ರೀಯ ಸಕ್ಕರೆ ಸಂಸ್ಥೆ ಅಂದಾಜು ಮಾಡಿದ 15 ದಿನಗಳ ಸರಾಸರಿ ಬೆಲೆ ಇತ್ತೀಚಿನ ವಾರಗಳಲ್ಲಿ 26 ಸೆಂಟ್ಸ್ ಗಿಂತ ಹೆಚ್ಚಾಗಿದೆ. ಭಾರತದಲ್ಲಿ ಸಕ್ಕರೆ ಬೆಲೆಗಳು ಸ್ಥಿರಗೊಳ್ಳಲು ಪ್ರಾರಂಭಿಸಿರುವ ಮಧ್ಯೆ ದೇಶವು ಸಕ್ಕರೆಯ ಮೇಲಿನ ರಫ್ತು ನಿರ್ಬಂಧಗಳನ್ನು ವಿಸ್ತರಿಸಿದೆ. ಅಲ್ಲದೇ ವಿಶೇಷವಾಗಿ ಹಬ್ಬದ ಋತುವಿನಲ್ಲಿ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರ ಉತ್ಸುಕವಾಗಿದೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿದ್ದು, ದೇಶದ ರಫ್ತು ಕಡಿತಗಳು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಹಿಂದಿನ 2021-2022 ರ ಋತುವಿನಲ್ಲಿ ದಾಖಲೆಯ 11.1 ಮಿಲಿಯನ್ ಟನ್ ಸಕ್ಕರೆಯನ್ನು ಮಾರಾಟ ಮಾಡಲು ಅವಕಾಶ ನೀಡಿದ ನಂತರ, ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ 2022-2023 ರ ಋತುವಿನಲ್ಲಿ ಕೇವಲ 6.2 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ಕಾರ್ಖಾನೆಗಳಿಗೆ ಅನುಮತಿ ನೀಡಿತ್ತು.
ಕೈಕೊಟ್ಟ ಮುಂಗಾರು - ಕುಸಿದ ಸಕ್ಕರೆ ಉತ್ಪಾದನೆ: 2018ರ ನಂತರ ಭಾರತದಲ್ಲಿ ಈ ಬಾರಿ ಮುಂಗಾರು ತೀರಾ ದುರ್ಬಲವಾಗಿದೆ ಮತ್ತು ಈ ಬಾರಿ ಕಬ್ಬಿನ ಉತ್ಪಾದನೆ ಕುಸಿಯುವ ನಿರೀಕ್ಷೆಯಿದೆ. ಹೀಗಾದಲ್ಲಿ ಬೆಲೆಗಳು ಹೆಚ್ಚಾಗಿ ಹಣದುಬ್ಬರಕ್ಕೆ ಕಾರಣವಾಗಬಹುದು. ಅಂದಾಜಿನ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಸಕ್ಕರೆ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 5 ರಿಂದ 8 ರಷ್ಟು ಹೆಚ್ಚಾಗಿವೆ.
2023-24ರ ಮಾರುಕಟ್ಟೆ ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಶೇಕಡಾ 8 ರಷ್ಟು ಕುಸಿದು 33.7 ಮಿಲಿಯನ್ ಮೆಟ್ರಿಕ್ ಟನ್ಗಳಿಗೆ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ತಿಳಿಸಿದೆ. ಎಥೆನಾಲ್ ತಯಾರಿಸಲು ಸ್ವಲ್ಪ ಸಕ್ಕರೆಯನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂಬ ಅಂಶವನ್ನೂ ಸಹ ಈ ಸಂದರ್ಭದಲ್ಲಿ ಪರಿಗಣಿಸುವುದು ಅಗತ್ಯ.
ಸಕ್ಕರೆ ಕಾರ್ಖಾನೆಗಳು ಕಳೆದ ಮಾರುಕಟ್ಟೆ ವರ್ಷದಲ್ಲಿ 4.1 ಮಿಲಿಯನ್ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಸಾಗಿಸಿದ್ದವು ಮತ್ತು ಈ ವರ್ಷವೂ ಅದೇ ಪ್ರಮಾಣದ ಸಕ್ಕರೆ ಎಥೆನಾಲ್ಗಾಗಿ ಹೋಗಬಹುದು.
ವಿಶ್ವದ ಅತಿದೊಡ್ಡ ಉತ್ಪಾದಕ ಬ್ರೆಜಿಲ್ ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇಲ್ಲಿ ಹಡಗುಗಳನ್ನು ಲೋಡ್ ಮಾಡುವ ಸಮಯ ಹೆಚ್ಚಾಗಿದ್ದು, ಬಂದರುಗಳಲ್ಲಿ ದಾಸ್ತಾನು ಸಂಗ್ರಹವಾಗುತ್ತಿದೆ. ಸರಕುಗಳನ್ನು ನಿರ್ವಹಿಸಲು ರೈಲ್ವೆ ಮತ್ತು ಬಂದರು ಮೂಲಸೌಕರ್ಯಗಳು ಸಾಕಾಗುತ್ತಿಲ್ಲ ಮತ್ತು ಇದೇ ವೇಳೆಗೆ ಸೋಯಾ ಬೆಳೆ ಕೂಡ ಸಾಗಣೆಯಾಗುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಇದನ್ನೂ ಓದಿ : 28 ಲಕ್ಷ ಚಂದಾದಾರರನ್ನು ಕಳೆದುಕೊಂಡ Disney+ Hotstar