ನವದೆಹಲಿ: ಹಿಂಡೆನ್‌ಬರ್ಗ್ ವರದಿ ಬಹಿರಂಗವಾದ ನಂತರ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಇದುವರೆಗೆ 36 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿರುವ ಗೌತಮ್ ಅದಾನಿ ಈಗ ವಿಶ್ವದ 10 ಶ್ರೀಮಂತ ಬಿಲಿಯನೇರ್‌ಗಳ ಎಲೈಟ್ ಕ್ಲಬ್‌ನಲ್ಲಿನ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. 60 ವರ್ಷದ ಅಹಮದಾಬಾದ್ ಮೂಲದ ಭಾರತೀಯ ಉದ್ಯಮಿಯಾಗಿರುವ ಅದಾನಿ ಈಗ 84.4 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಹೇಳಿದೆ. ವಿಶ್ವದ ಅಗ್ರ 500 ಶ್ರೀಮಂತ ಪುರುಷರು ಮತ್ತು ಮಹಿಳೆಯರ ಪಟ್ಟಿಯಲ್ಲಿ, ಅದಾನಿ 2023ನೇ ವರ್ಷದಲ್ಲಿ ಈವರೆಗಿನ ಅತಿದೊಡ್ಡ ಕುಸಿತ ಕಂಡಿದ್ದಾರೆ.
2022 ರಲ್ಲಿ ಸುಮಾರು 40 ಶತಕೋಟಿ ಡಾಲರ್ ವಾರ್ಷಿಕ ಗಳಿಕೆಯೊಂದಿಗೆ ಅದಾನಿ ಅತ್ಯಧಿಕ ಸಂಪತ್ತು ಗಳಿಸಿದ ವ್ಯಕ್ತಿಯಾಗಿದ್ದರು. ಆದರೆ, ಈಗ ಅವರು ಕಳೆದ ವರ್ಷ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಕಂಡ ಎಲ್ಲಾ ಲಾಭಗಳನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ ಗೌತಮ್ ಅದಾನಿ ಈಗಲೂ ಅತಿ ಶ್ರೀಮಂತ ಭಾರತೀಯನಾಗಿ ಮುಂದುವರೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಪಟ್ಟಿಯಲ್ಲಿ ಅದಾನಿ ನಂತರ ಅಂದರೆ ನಂ.12ನೇ ಸ್ಥಾನದಲ್ಲಿದ್ದಾರೆ.
ನ್ಯೂಯಾರ್ಕ್ ಮೂಲದ ಆರ್ಥಿಕ ವಿಶ್ಲೇಷಕ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ಗ್ರೂಪ್ನಲ್ಲಿ ವಿವಿಧ ವಂಚನೆ ಮತ್ತು ಮೋಸಗಳು ನಡೆದಿವೆ ಎಂದು ಆರೋಪಿಸಿ ಕಳೆದ ವಾರ 32 ಸಾವಿರ ಪದಗಳ ವರದಿಯನ್ನು ಬಿಡುಗಡೆ ಮಾಡಿತ್ತು. ಅದರ ನಂತರ ಅದಾನಿ ಷೇರುಗಳು ಪ್ರತಿ ವಹಿವಾಟಿನ ದಿನದಲ್ಲಿ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿವೆ. ಬ್ಲೂಮ್‌ಬರ್ಗ್ ಅಂಕಿ - ಅಂಶಗಳ ಪ್ರಕಾರ ಅದಾನಿ ಕಳೆದ ಮೂರು ವಹಿವಾಟು ಅವಧಿಗಳಲ್ಲಿ 34 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳು ತಮ್ಮ ಮಾರುಕಟ್ಟೆ ಬಂಡವಾಳದ ನಾಲ್ಕನೇ ಒಂದು ಭಾಗದಷ್ಟು ಮೌಲ್ಯ ಕಳೆದುಕೊಂಡಿದ್ದೇ ಇದಕ್ಕೆ ಕಾರಣವಾಗಿದೆ.
ಬಂದರು, ಎಫ್‌ಎಂಸಿಜಿ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಾದ್ಯಂತ ಹರಡಿರುವ ಕಂಪನಿಯ ಷೇರು ಬೆಲೆಗಳು ಗಗನಕ್ಕೇರಿದ್ದರಿಂದ ಅದಾನಿ ಕಳೆದ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಕೆಲವೇ ಸಮಯದವರೆಗೆ ನಂ.2 ಸ್ಥಾನದಲ್ಲಿದ್ದರು. ಆಗ ಎಲೋನ್ ಮಸ್ಕ್ ನಂ.1 ಸ್ಥಾನದಲ್ಲಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದಾನಿ ಅವರು ಬಿಲ್ ಗೇಟ್ಸ್, ಜೆಫ್ ಬೆಜೋಸ್ ಮತ್ತು ಗೂಗಲ್ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರಂಥ ಹತ್ತು ಬಿಲಿಯನೇರ್‌ಗಳ ಹಿಂದೆ ಇದ್ದಾರೆ. 84.4 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ ನಂ.12ನೇ ಸ್ಥಾನದಲ್ಲಿದ್ದಾರೆ.
ನ್ಯೂಯಾರ್ಕ್ ಮೂಲದ ಕಂಪನಿ ಹಿಂಡೆನ್ಬರ್ಗ ಎತ್ತಿದ 88 ಪ್ರಶ್ನೆಗಳಿಗೆ 413 ಪುಟಗಳಷ್ಟು ಸುದೀರ್ಘವಾದ ಉತ್ತರ ನೀಡಿರುವ ಅದಾನಿ, ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಇದು ಕೇವಲ ಒಂದು ಕಂಪನಿಯನ್ನು ಗುರಿಯಾಗಿಸಿ ನಡೆಸಲಾದ ದಾಳಿಯಲ್ಲ. ಬದಲಾಗಿ ಇದು ಇಡೀ ಭಾರತ, ಭಾರತದ ಸ್ವಾತಂತ್ರ್ಯ, ಸಮಗ್ರತೆಯನ್ನು ನೇರವಾಗಿ ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎಂದು ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: ಸರ್ವಪಕ್ಷಗಳ ಸಭೆ: ಅದಾನಿ ಗ್ರೂಪ್ ವಂಚನೆ, ಬಿಬಿಸಿ ಸಾಕ್ಷ್ಯಚಿತ್ರ ಚರ್ಚೆಗೆ ಒತ್ತಾಯ