ನವದೆಹಲಿ : ಕೆಲ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಂಕವನ್ನು ಹೆಚ್ಚಿಸುವ ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ 2019 ರಲ್ಲಿ ವಿಧಿಸಲಾದ ಕಡಲೆ, ಬೇಳೆಕಾಳು ಮತ್ತು ಸೇಬುಗಳು ಸೇರಿದಂತೆ ಸುಮಾರು ಅರ್ಧ ಡಜನ್ ಅಮೆರಿಕದ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕವನ್ನು ಭಾರತ ತೆಗೆದುಹಾಕಿದೆ. ಅಮೆರಿಕದ ಕ್ರಮಕ್ಕೆ ಪ್ರತೀಕಾರವಾಗಿ ಭಾರತವು 2019 ರಲ್ಲಿ 28 ಯುಎಸ್ ಉತ್ಪನ್ನಗಳ ಮೇಲೆ ಈ ಸುಂಕವನ್ನು ವಿಧಿಸಿತ್ತು.
ಹಣಕಾಸು ಸಚಿವಾಲಯವು ಸೆಪ್ಟೆಂಬರ್ 5 ರ ಅಧಿಸೂಚನೆಯ ಮೂಲಕ ಕಡಲೆ, ಬೇಳೆಕಾಳು (ಮಸೂರ್), ಸೇಬು, ವಾಲ್ನಟ್ ಮತ್ತು ತಾಜಾ ಅಥವಾ ಒಣಗಿದ ಬಾದಾಮಿ ಮತ್ತು ಬಾದಾಮಿ ಚಿಪ್ಪು ಸೇರಿದಂತೆ ಕೆಲ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುವ ಬಗ್ಗೆ ಮಾಹಿತಿ ನೀಡಿದೆ. ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಭೇಟಿ ನೀಡುವ ಮುನ್ನ ಭಾರತ ಈ ಕ್ರಮ ಕೈಗೊಂಡಿರುವುದು ಗಮನಾರ್ಹ.
ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಸಮಯದಲ್ಲಿ, ಉಭಯ ದೇಶಗಳು ಆರು ಡಬ್ಲ್ಯುಟಿಒ (ವಿಶ್ವ ವ್ಯಾಪಾರ ಸಂಸ್ಥೆ) ವಿವಾದಗಳನ್ನು ಕೊನೆಗೊಳಿಸಲು ಮತ್ತು ಕೆಲವು ಅಮೆರಿಕದ ಉತ್ಪನ್ನಗಳ ಮೇಲಿನ ಪ್ರತೀಕಾರದ ಸುಂಕವನ್ನು ತೆಗೆದುಹಾಕಲು ನಿರ್ಧರಿಸಿದ್ದವು. ಒಪ್ಪಂದದ ಭಾಗವಾಗಿ, ಭಾರತವು ಕಡಲೆ (10 ಪ್ರತಿಶತ), ಬೇಳೆಕಾಳು (20 ಪ್ರತಿಶತ), ತಾಜಾ ಬಾದಾಮಿ ಅಥವಾ ಒಣಗಿದ ಬಾದಾಮಿ (ಪ್ರತಿ ಕೆ.ಜಿ.ಗೆ 7 ರೂ. ಸುಂಕ), ಬಾದಾಮಿ (ಪ್ರತಿ ಕೆ.ಜಿ.ಗೆ 20 ರೂ. ಸುಂಕ), ವಾಲ್ನಟ್ (20 ಪ್ರತಿಶತ) ಮತ್ತು ತಾಜಾ ಸೇಬು (20 ಪ್ರತಿಶತ) ಗಳ ಮೇಲಿನ ಹೆಚ್ಚುವರಿ ಸುಂಕವನ್ನು ತೆಗೆದುಹಾಕಲಿದೆ.
ಜುಲೈನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, ಬಾದಾಮಿ (ತಾಜಾ ಅಥವಾ ಒಣಗಿದ, ಚಿಪ್ಪಿನಲ್ಲಿರುವ), ವಾಲ್ನಟ್, ಕಡಲೆ, ಮಸೂರ, ಸೇಬು, ವೈದ್ಯಕೀಯ ರೋಗನಿರ್ಣಯ ಕಾರಕಗಳು ಮತ್ತು ಬೋರಿಕ್ ಆಮ್ಲದ ಆಮದಿನ ಮೇಲಿನ ಪ್ರತೀಕಾರದ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದರು.
ಅಮೆರಿಕದೊಂದಿಗಿನ ಪ್ರತೀಕಾರದ ಸುಂಕವನ್ನು ತೆಗೆದುಹಾಕುವುದರಿಂದ ಅಥವಾ ಆಮದು ಸುಂಕವನ್ನು ಕಡಿತಗೊಳಿಸುವುದರಿಂದ ಭಾರತಕ್ಕೆ ನಷ್ಟವಾಗುವುದಿಲ್ಲ ಎಂದು ಅವರು ಹೇಳಿದ್ದರು. ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ದ್ವಿಪಕ್ಷೀಯ ಸರಕುಗಳ ವ್ಯಾಪಾರವು 2021-22ರಲ್ಲಿ 119.5 ಬಿಲಿಯನ್ ಡಾಲರ್ ಇದ್ದದ್ದು, 2022-23ರಲ್ಲಿ 128.8 ಬಿಲಿಯನ್ ಡಾಲರ್ಗೆ ಏರಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ನವದೆಹಲಿಗೆ ಆಗಮಿಸಲಿದ್ದು, ವಾರಾಂತ್ಯದಲ್ಲಿ ಜಿ 20 ಯಲ್ಲಿನ ಸರ್ಕಾರಗಳು ಮತ್ತು ದೇಶಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ : ಇನ್ನು ಯುಪಿಐ ಮೂಲಕ ಡಿಜಿಟಲ್ ರೂಪಾಯಿ ಪಾವತಿ ಸಾಧ್ಯ! ಹೇಗೆ ಗೊತ್ತೇ?