ನ್ಯೂಯಾರ್ಕ್ (ಯುಎಸ್‌ಎ): ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಕಂಪನಿಗಳ ಸಾಲಿಗೆ ಅಮೆರಿಕದ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ (ಐಬಿಎಂ) ಕೂಡಾ ಸೇರಿಕೊಂಡಿದೆ. ಸುಮಾರು 3,900 ಉದ್ಯೋಗಗಳನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ಈ ಕಂಪನಿ ತೆಗೆದುಕೊಂಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ಗೆ ಐಬಿಎಂ ವಕ್ತಾರರೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಐಬಿಎಂ ಆರಂಭಿಸಿದ ಐಟಿ ಸೇವೆಗಳ ವ್ಯವಹಾರವಾದ ಕಿಂಡ್ರಿಲ್ ಹೋಲ್ಡಿಂಗ್ಸ್ (Kyndryl Holdings) ಹಾಗೂ ಹೆಲ್ತ್‌ಕೇರ್ ಹಂಚಿಕೆಯಲ್ಲಿರುವ ಕಾರ್ಯನಿರ್ವಹಿಸುವ ಉದ್ಯೋಗಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಐಬಿಎಂನ ಇತ್ತೀಚಿನ ವಾರ್ಷಿಕ ಆದಾಯ ವರದಿಯ ಪ್ರಕಾರ, ಶೇ 1.4 ರಷ್ಟು ಉದ್ಯೋಗಿಗಳನ್ನು ಐಬಿಎಂ ಕಡಿತಗೊಳಿಸಲಿದೆ. ಮಾಹಿತಿ ತಂತ್ರಜ್ಞಾನ ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕದಲ್ಲಿ ವೆಚ್ಚವನ್ನು ಕಡಿಮೆಗೊಳಿಸುವ ನಿರ್ಧಾರ ಪ್ರಕಟಿಸಿದೆ. ಇದರ ಪರಿಣಾಮವೇ ಈ ಜಾಬ್ ಕಟ್ ನಿರ್ಧಾರ.
ಡಿಸೆಂಬರ್ 31ಕ್ಕೆ ಮುಗಿದಿರುವ ನಾಲ್ಕನೇ ತ್ರೈಮಾಸಿಕದಲ್ಲಿ ಐಬಿಎಂ 2.71 ಶತಕೋಟಿ ಡಾಲರ್ ವ್ಯವಹಾರ ಹೊಂದಿದೆ. ಹಿಂದಿನ ವರ್ಷದ ಅವಧಿಗೆ ಹೋಲಿಕೆ ಮಾಡಿದರೆ, ಕಂಪನಿಯ ವಿವಿಧ ವಿಭಾಗಗಳಲ್ಲಿನ ಆದಾಯ ವೃದ್ಧಿಯಾಗಿದೆ. ತಂತ್ರಜ್ಞಾನ ವಿಭಾಗದಿಂದ ಕಂಪನಿಯು ಶೇ 2.8 ರಷ್ಟು ಅಥವಾ 7.3 ಶತಕೋಟಿ ಆದಾಯ ಗಳಿಸಿದೆ. ಸಲಹೆ ವಿಭಾಗದಲ್ಲಿ- 0.5 ಶೇಕಡಾ ಅಥವಾ 4.8 ಶತಕೋಟಿ ಡಾಲರ್, ಮೂಲಸೌಕರ್ಯದಲ್ಲಿ ಶೇ 1.6 ರಷ್ಟು ಅಥವಾ 4.5 ಶತಕೋಟಿಗೆ ಆದಾಯ ಏರಿಕೆಯಾಗಿದೆ. ಕಳೆದ ವರ್ಷ, ಐಬಿಎಂನ ಹಣಕಾಸು ವಿಭಾಗವು 0.4 ಶೇ ಅಥವಾ 200 ಮಿಲಿಯನ್ ಡಾಲರ್ ಆದಾಯ ಇಳಿಕೆಯಾಗಿತ್ತು.
ಸಂಭಾವ್ಯ ಆರ್ಥಿಕ ಹಿಂಜರಿತ: ''ಮಾಹಿತಿ ತಂತ್ರಜ್ಞಾನ ಕಂಪನಿಗಳು ಆರ್ಥಿಕತೆಗಳ ಸಂಭಾವ್ಯ ಹಿಂಜರಿತದ ಆತಂಕ ಎದುರಿಸುತ್ತಿವೆ. ಖರ್ಚಿನ ವಿಚಾರದಲ್ಲಿ ಎಚ್ಚರಿಕೆಯ ಧೋರಣೆ ತಾಳುತ್ತಿವೆ '' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸುವುದಕ್ಕೆ ಇದು ಕೂಡಾ ಒಂದು ಪ್ರಮುಖ ಕಾರಣವಾಗಿದೆ. ಮೈಕ್ರೋಸಾಫ್ಟ್ ಕಂಪನಿಯೂ ಕೂಡಾ ಉದ್ಯೋಗಗಳನ್ನು ತೆಗೆದುಹಾಕುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿತ್ತು. ತನ್ನ ಸಾಫ್ಟ್‌ವೇರ್ ಮತ್ತು ಕ್ಲೌಡ್ ಸೇವೆಗಳಿಗೆ ಬೇಡಿಕೆ ಕುಸಿದಿದ್ದು, ಕಂಪನಿಯ ಇತ್ತೀಚಿನ ತ್ರೈಮಾಸಿಕದಲ್ಲಿ ಕಳೆದ ಆರು ವರ್ಷಗಳಲ್ಲೇ ಅತಿ ಕಡಿಮೆ ವಹಿವಾಟು ನಡೆಸಿದೆ.
ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ! ಟಿಕೆಟ್ ಡೌನ್ಗ್ರೇಡ್ ಮಾಡಿದ್ರೆ ಶೇ 75 ರಷ್ಟು ಹಣ ವಾಪಸ್