ನವದೆಹಲಿ: ದುರ್ಬಲ ಜಾಗತಿಕ ಹಣಕಾಸು ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 669 ರೂ. ಕುಸಿದು 56,754 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 57,423 ರೂ. ಆಗಿತ್ತು. ಬೆಳ್ಳಿ ಸಹ ಪ್ರತಿ ಕಿಲೋಗ್ರಾಂಗೆ 1,026 ರೂ.ಗೆ ಕುಸಿದು 66,953 ರೂ. ಆಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ 10 ಗ್ರಾಂಗೆ 56,754 ರೂ. ದರದಲ್ಲಿ ವಹಿವಾಟು ನಡೆಸಿತು.
ಇದು ಪ್ರತಿ 10 ಗ್ರಾಂಗೆ 669 ರೂ. ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ. ಸಾಗರೋತ್ತರ ಮಾರುಕಟ್ಟೆಯಲ್ಲಿ, ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್‌ಗೆ USD 1,866 ಮತ್ತು USD 22.12 ಕಡಿಮೆಯಾಗಿವೆ. ಕಾಮೆಕ್ಸ್ ಚಿನ್ನದ ಬೆಲೆಗಳು ಶುಕ್ರವಾರ ಏಷ್ಯಾದ ವಹಿವಾಟಿನ ಸಮಯದಲ್ಲಿ ಕಡಿಮೆ ವಹಿವಾಟು ನಡೆಸಿದವು ಎಂದು ಗಾಂಧಿ ಹೇಳಿದರು. ಜನವರಿಯಲ್ಲಿ ಚಿನ್ನದ ಬೆಲೆಗಳು ಹೆಚ್ಚಾಗಿರುವುದರಿಂದ ಅನೇಕರು ಚಿಂತಿತರಾಗಿದ್ದಾರೆ. ಅದರಲ್ಲೂ ಇಷ್ಟರಲ್ಲೇ ಮನೆಯಲ್ಲಿ ಮದುವೆ ಮುಂತಾದ ಶುಭ ಕಾರ್ಯ ಇಟ್ಟುಕೊಂಡಿರುವವರಿಗೆ ಚಿನ್ನದ ಬೆಲೆ ಹೆಚ್ಚಾಗಿರುವುದು ತುಸು ಚಿಂತೆ ಮೂಡಿಸಿದೆ.
ಇತರ ಮಾರುಕಟ್ಟೆಗಳು ಮತ್ತು ಆರ್ಥಿಕತೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಚಿನ್ನವನ್ನು ಸಾಮಾನ್ಯವಾಗಿ ಹೂಡಿಕೆದಾರರಿಗೆ ಸುರಕ್ಷಿತ ಮಾರ್ಗವಾಗಿ ನೋಡಲಾಗುತ್ತದೆ ಮತ್ತು ಹಣದುಬ್ಬರದ ಸಮಯದಲ್ಲಿ ಚಿನ್ನವು ಅದರ ವಿರುದ್ಧ ರಕ್ಷಣೆಯಾಗಿ ಕಂಡುಬರುತ್ತದೆ. ಹಣದುಬ್ಬರವು ಬಡ್ಡಿದರಗಳನ್ನು ಮೀರಿಸಲು ಪ್ರಾರಂಭಿಸಿದಾಗ, ಹೂಡಿಕೆದಾರರು ತಮ್ಮ ಹಣವನ್ನು ಹೆಚ್ಚು ಸ್ಥಿರವಾದ ಹೂಡಿಕೆಗಳಲ್ಲಿ ಹಾಕಲು ಪ್ರಯತ್ನಿಸುತ್ತಾರೆ.
ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್‌ನ ವರದಿಯ ಪ್ರಕಾರ- ಷೇರುಗಳ ಬೆಲೆ ಏರಿದಾಗ ಮತ್ತು ಹೂಡಿಕೆದಾರರು ಚಿನ್ನದ ಮೇಲೆ ಹಿಡಿತ ಸಾಧಿಸಲು ಮತ್ತು ಅದರ ಮೌಲ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದಾಗ ಆರ್ಥಿಕ ಹಿಂಜರಿತದ ವಿರುದ್ಧ ಚಿನ್ನವು ಸುರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಇತರ ಲೋಹಗಳ ಮೇಲೆ ಕೂಡ ಹೂಡಿಕೆ ಮಾಡಿದರೂ, ವಿಶೇಷವಾಗಿ ಬೆಳ್ಳಿಗೆ ಹೋಲಿಸಿದರೆ ಚಿನ್ನವು ಹೆಚ್ಚು ಸ್ಥಿರವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಬೆಳ್ಳಿಯ ಬೆಲೆಗಳು ಹೆಚ್ಚು ಏರಿಳಿತವಾಗುತ್ತಿರುತ್ತವೆ.
ತಮ್ಮ ಸಂಪತ್ತನ್ನು ಸಂರಕ್ಷಿಸಲು ಬಯಸುತ್ತಿರುವವರಿಗೆ, ಚಿನ್ನವು ಉತ್ತಮ ಹೂಡಿಕೆಯಾಗಿದೆ. ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವ ಖರೀದಿದಾರರಿಗೆ ಮೂರು ಮಾರ್ಗಗಳಿವೆ. ಚಿನ್ನದ ಗಟ್ಟಿ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳನ್ನು ಪರವಾನಗಿ ಪಡೆದ ಚಿಲ್ಲರೆ ವ್ಯಾಪಾರಿಗಳ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಭೌತಿಕ ಚಿನ್ನ ಬೇಡ ಎನ್ನುವವರು ಚಿನ್ನ-ವಿನಿಮಯ ಟ್ರೇಡೆಡ್ ಫಂಡ್‌ಗಳ (ಇಟಿಎಫ್‌ಗಳು)ನ್ನು ಖರೀದಿಸಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಲು ಇನ್ನೊಂದು ಮಾರ್ಗವೆಂದರೆ ಗಣಿಗಾರಿಕೆ ಕಂಪನಿಗಳಂತಹ ಚಿನ್ನಕ್ಕೆ ಸಂಬಂಧಿಸಿದ ಷೇರುಗಳನ್ನು ಖರೀದಿಸುವುದು.
ಚಿನ್ನವು ಇತಿಹಾಸದಲ್ಲಿಯೇ ಅತ್ಯಂತ ಹಳೆಯ ಹೂಡಿಕೆ ಆಸ್ತಿಯಾಗಿದೆ. ಕೆಲವು ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ ಮತ್ತು ಇನ್ನು ಕೆಲವರು ಅದನ್ನು ತಿರಸ್ಕರಿಸುತ್ತಾರೆ. ಆದರೆ ಮಾರುಕಟ್ಟೆಗಳಲ್ಲಿ ಹಳದಿ ಲೋಹವು ವಿಶಿಷ್ಟವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: Watch.. ವೇಸ್ಟೇಜ್ ವಿಚಾರಕ್ಕೆ ಚಿನ್ನ ಬೆಳ್ಳಿ ಆಭರಣ ತಯಾರಕರ ನಡುವೆ ಮಾರಾಮಾರಿ