ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿಗಳ ಬೆಲೆ ಏರಿಕೆಯ ನಡುವೆಯೇ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 440 ರೂ.ಗಳ ಏರಿಕೆ ಕಂಡು 60,340 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಮಾಹಿತಿ ನೀಡಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 59,900 ರೂ.ಗೆ ಬಂದ್ ಆಗಿತ್ತು. ಪ್ರಸ್ತುತ ಬೆಳ್ಳಿಯ ಬೆಲೆಯೂ 850 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 75,450 ರೂಪಾಯಿಗಳಿಗೆ ತಲುಪಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ, ಸ್ಪಾಟ್ ಚಿನ್ನದ ಬೆಲೆ ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂಗೆ 440 ರೂ.ನಿಂದ 60,340 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,996 ಡಾಲರ್ ಗೆ ಏರಿಕೆ ಕಂಡರೆ, ಬೆಳ್ಳಿ ಕೂಡ ಪ್ರತಿ ಔನ್ಸ್ ಗೆ 25.16 ಡಾಲರ್ ಗೆ ಏರಿಕೆಯಾಗಿದೆ. ಗುರುವಾರ, ಏಷ್ಯನ್ ವಹಿವಾಟಿನ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ನ್ಯೂಯಾರ್ಕ್ ಮೂಲದ ಸರಕು ವಿನಿಮಯ ಕೊಮೆಕ್ಸ್‌ನಲ್ಲಿ ಚಿನ್ನದ ಬೆಲೆಯು 0.11 ಶೇಕಡಾ ಏರಿಕೆಯಾಗಿ $ 1,996 ಔನ್ಸ್‌ಗೆ ತಲುಪಿದೆ ಎಂದು ಸೌಮಿಲ್ ಗಾಂಧಿ ಹೇಳಿದರು.
ಚಿನ್ನ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದನ್ನು ಸುಭದ್ರ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ. ಈ ವರ್ಷ ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದರಿಂದ ಇವುಗಳಲ್ಲಿ ಹೂಡಿಕೆ ಮಾಡುವುದು ಮತ್ತೂ ಆಕರ್ಷಕವಾಗುತ್ತಿದೆ. ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಈ ವರ್ಷದ ಆರಂಭದಿಂದಲೇ ಅದ್ಭುತವಾದ ಏರಿಕೆಯನ್ನು ಕಂಡಿವೆ. ಇವುಗಳ ಬೆಲೆಗಳು ಸುಮಾರು ಶೇ ಶೇಕಡಾ 10 ರಷ್ಟು ಏರಿಕೆಯಾಗಿದೆ.
ಈ ವರ್ಷ ಸುರಕ್ಷಿತ ಹೂಡಿಕೆಯ ವರ್ಷ. ಬೇಡಿಕೆ ಮತ್ತು ಪೂರೈಕೆ ಅಂಶಗಳು ಐತಿಹಾಸಿಕವಾಗಿ ಚಿನ್ನದ ಬೆಲೆಗಳ ಮೇಲೆ ನೇರ ಪರಿಣಾಮ ಬೀರಿಲ್ಲ. ಜಾಗತಿಕ ಆರ್ಥಿಕ ಹಿಂಜರಿತ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ಬಡ್ಡಿದರಗಳ ನಿಧಾನಗತಿಯ ಏರಿಕೆಯಿಂದಾಗಿ ಚಿನ್ನದ ಬೆಲೆ ಹೆಚ್ಚಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ತನ್ನ ವರದಿಯಲ್ಲಿ ಹೇಳಿದೆ.
ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಆಭರಣ, ಚಿನ್ನದ ಬಿಸ್ಕೇಟ್, ಚಿನ್ನದ ನಾಣ್ಯ.. ಹೀಗೆ ಹಲವು ರೀತಿಯಲ್ಲಿ ಚಿನ್ನ ಖರೀದಿ ಮಾಡಬಹುದು. ಹೆಚ್ಚಾಗಿ ಜನರು ಚಿನ್ನದ ಆಭರಣ ಖರೀದಿ ಮಾಡುತ್ತಾರೆ. ಆದರೆ, ಹೂಡಿಕೆ ದೃಷ್ಟಿಯಿಂದ ಚಿನ್ನದ ಗಟ್ಟಿ ಖರೀದಿ ಮಾಡುವುದು ಉತ್ತಮ ಅಂತಾರೆ ತಜ್ಞರು. ಏಕೆಂದರೆ ಚಿನ್ನದ ಆಭರಣ ಖರೀದಿ ಮಾಡುವಾಗ ಮೇಕಿಂಗ್, ವೇಸ್ಟೇಜ್ ಎಂದು ಸಾಕಷ್ಟು ಹಣ ಕಡಿತ ಆಗುತ್ತೆ.. ಜೊತೆಗೆ ಮಾರುವಾಗಲೂ ವೇಸ್ಟೇಜ್ ಹಣ ಹೋಗುತ್ತದೆ. ಆದರೆ ಚಿನ್ನದ ಗಟ್ಟಿಯ ವಿಚಾರ ಹಾಗಲ್ಲ. ಅದಕ್ಕೆ ಮೇಕಿಂಗ್, ವೇಸ್ಟೇಜ್ ಯಾವುದೂ ಇರಲ್ಲ. ಇದ್ದರೂ ತೀರಾ ಕಡಿಮೆ ಇರುತ್ತೆ. ಹೀಗಾಗಿ, ಆಭರಣ ಧರಿಸಬೇಕು ಅನ್ನೋ ಆಸೆ ಇದ್ದರೆ ಮಾತ್ರ ಚಿನ್ನದ ಆಭರಣ ಖರೀದಿ ಮಾಡಬಹುದು.
ಇದನ್ನೂ ಓದಿ : 5 ಸಾವಿರ ಜನರಿಂದ ನನ್ನ ಆಸ್ತಿ ಪತ್ರ ಡೌನ್ಲೋಡ್: ಡಿಕೆಶಿ