ನವದೆಹಲಿ: ವಿಶ್ವದ ಎಲ್ಲ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿರುವ ಮಧ್ಯೆಯೇ ಕಚ್ಚಾತೈಲ ದರ ಪ್ರತಿ ಬ್ಯಾರಲ್ಗೆ 96.09 ಡಾಲರ್ಗೆ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕ್ಷೀಣಿಸಿದ ಕಾರಣಕ್ಕಾಗಿ ಕಚ್ಚಾ ತೈಲ ಬೆಲೆ ಮೂರು ತಿಂಗಳ ಕನಿಷ್ಠಕ್ಕೆ ಕುಸಿದಿದೆ.
ಕಳೆದ 3 ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್‌ಗೆ 96.09 ಡಾಲರ್ಗೆ ವ್ಯಾಪಾರ ನಡೆಸಿದೆ. ಇದು ಆರ್ಥಿಕ ಹೊಡೆತಕ್ಕೀಡಾದ ರಾಷ್ಟ್ರಗಳಿಗೆ ನೆರವಾಗಲಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ಶುರುವಾದ ಬಳಿಕ ತೈಲ ಪೂರೈಕೆಗೆ ತೊಂದರೆ ಉಂಟಾಗಿತ್ತು. ಅತಿ ದೊಡ್ಡ ತೈಲ ಪೂರೈಕೆ ರಾಷ್ಟ್ರವಾದ ರಷ್ಯಾದ ಮೇಲೆ ಅಮೆರಿಕ ಸೇರದಂತೆ ಯುರೋಪಿಯನ್ ರಾಷ್ಟ್ರಗಳು ಅದರ ಕಚ್ಚಾ ತೈಲದ ಖರೀದಿಯ ಮೇಲೆ ನಿರ್ಬಂಧ ಹೇರಲಾಗಿತ್ತು. ಇದು ಕಚ್ಚಾ ತೈಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳಲ್ಲಿ ತ್ವರಿತ ಏರಿಕೆಗೆ ಕಾರಣವಾಗಿತ್ತು.
ಯುದ್ಧ ಆರಂಭಕ್ಕೂ ಮೊದಲು ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 90 ಡಾಲರ್ ಇತ್ತು. ಬಳಿಕ ಅದು ಫೆಬ್ರವರಿ ಅಂತ್ಯದಲ್ಲಿ 115 ಡಾಲರ್ಗೆ ತಲುಪಿ ದುಬಾರಿಯಾಗಿತ್ತು.
ರಷ್ಯಾ ತೈಲ ಮೇಲೆ ಹೊಸ ನಿರ್ಬಂಧ: ಉಕ್ರೇನ್ ಮೇಲೆ ಸತತ 4 ತಿಂಗಳಿಂದ ದಾಳಿ ಮಾಡುತ್ತಿರುವ ರಷ್ಯಾವನ್ನು ನಿಯಂತ್ರಿಸಲು ಅಮೆರಿಕ ನೇತೃತ್ವದ ಯುರೋಪಿಯನ್ ರಾಷ್ಟ್ರಗಳು ಆ ದೇಶದ ಕಚ್ಚಾ ತೈಲದ ಮೇಲೆ ಹೊಸ ರೀತಿಯ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ. ಈಗಾಗಲೇ ಹಲವಾರು ನಿರ್ಬಂಧಗಳನ್ನು ವಿಧಿಸಿದಾಗ್ಯೂ ರಷ್ಯಾದ ಆರ್ಥಿಕತೆಗೆ ಯಾವುದೇ ಭಂಗ ಉಂಟಾಗಿಲ್ಲ.
ಇದರಿಂದ ರಷ್ಯಾದ ಮೇಲೆ ಮತ್ತಷ್ಟು ಒತ್ತಡ ಹೇರಿ ಆ ದೇಶದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲು ಹೊಸ ತಂತ್ರವನ್ನು ಹೆಣೆಯಲು ಅಮೆರಿಕ ಯೋಜಿಸಿದೆ ಎಂದು ಹೇಳಲಾಗಿದೆ.
ಓದಿ: ಲಡಾಖ್ನ ಲೇಹ್‌ನಲ್ಲಿ ರಫೇಲ್ ಫೈಟರ್ ಜೆಟ್ ನಿಯೋಜನೆ.. ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನೆ