ನವದೆಹಲಿ: ಯುಗಾದಿ ಸಂಭ್ರಮದಲ್ಲೂ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಏರಿಕೆಯಾಗುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇಂಧನ ಬೆಲೆಗಳು ಶನಿವಾರ ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ 10 ಬಾರಿ ಇಂಧನ ಬೆಲೆ ಏರಿಕೆ ಕಂಡಿದ್ದು, ಈವರೆಗೆ ಪ್ರತಿ ಲೀಟರ್ ಇಂಧನಗಳ ಮೇಲೆ 7.20 ರೂಪಾಯಿ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 102.61 ರೂಪಾಯಿಯಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 93.87 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 85 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ 117.57 ರೂಪಾಯಿ ಮತ್ತು ಮತ್ತು ಪ್ರತಿ ಲೀಟರ್ ಡೀಸೆಲ್ಗೆ 101.79 ರೂಪಾಯಿ ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 108.13 ರೂಪಾಯಿ, ಡೀಸೆಲ್ ಬೆಲೆ 92.03 ರೂಪಾಯಿ ಇದೆ.
ಕಳೆದ ವರ್ಷ ನವೆಂಬರ್ 4ರಿಂದ ಇಂಧನ ಬೆಲೆಗಳು ಭಾರತದಲ್ಲಿ ಏರಿಳಿತ ಕಂಡಿರಲಿಲ್ಲ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆಯಾದ ನಂತರ ಮಾರ್ಚ್ 22ರಂದು ಇಂಧನ ಬೆಲೆ ಏರಿಕೆಯಾಗಿತ್ತು. ಕಳೆದ ವರ್ಷ ನವೆಂಬರ್ 3ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಬೆಲೆಗಳನ್ನು ಕಡಿತಗೊಳಿಸಲು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಇದನ್ನೂ ಓದಿ: 2021-22ರ ನಿಗದಿತ ಗುರಿ ದಾಟಿ ಭರ್ಜರಿ ರಾಜಸ್ವ ಸಂಗ್ರಹ ಮಾಡಿದ ಅಬಕಾರಿ ಇಲಾಖೆ