ನವದೆಹಲಿ: ದುರ್ಬಲಗೊಂಡ ಜಾಗತಿಕ ಮಾರುಕಟ್ಟೆ, ಉಕ್ರೇನ್- ರಷ್ಯಾ ಯುದ್ಧದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ 160 ಪಾಯಿಂಟ್‌ಗಳಷ್ಟು ಏರಿಕೆ ಕಂಡಿತ್ತು. ಬಳಿಕ ಅದು 135 ಅಂಕ ಕುಸಿತ ಕಂಡಿದೆ. ನಿಫ್ಟಿ ಕೂಡ 60 ಅಂಕಗಳಷ್ಟು ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರಕ್ರಿಯೆಗಳ ನಡುವೆ ಆರ್‌ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಅಲ್ಪ ಲಾಭಕ್ಕೆ ಮರಳಿವೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 159.56 ಪಾಯಿಂಟ್‌ಗಳ ಏರಿಕೆಯೊಂದಿಗೆ 53,067.49ಕ್ಕೆ ವಹಿವಾಟು ಶುರುಮಾಡಿತು. ಎನ್‌ಎಸ್‌ಇ ನಿಫ್ಟಿ ಕೂಡ 45.4 ಪಾಯಿಂಟ್‌ಗಳ ಏರಿಕೆ ಕಂಡು 15,797.45ಕ್ಕೆ ತಲುಪಿತ್ತು.
ಈ ವೇಳೆ ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ನೆಸ್ಲೆ, ಹಿಂದೂಸ್ತಾನ್ ಯುನಿಲಿವರ್ ಮತ್ತು ಮಾರುತಿ ಆರಂಭದಲ್ಲೇ ಲಾಭ ಗಳಿಸಿದವು. ಟಾಟಾ ಸ್ಟೀಲ್, ಟಿಸಿಎಸ್, ಮಹೀಂದ್ರಾ ಮತ್ತು ಮಹೀಂದ್ರಾ, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ಅಲ್ಪ ನಷ್ಟಕ್ಕೀಡಾದವು.
ಬಳಿಕ ಮತ್ತೆ ಇಳಿಕೆ ಕಂಡ ಸೆನ್ಸೆಕ್ಸ್ 10.40 ರ ಸುಮಾರಿಗೆ 142 ಅಂಕ ಕುಸಿದರೆ, ನಿಫ್ಟಿ 59 ಅಂಕ ಇಳಿಕೆ ಕಂಡಿದೆ. ಮಾರುಕಟ್ಟೆಯ ಏರಿಳಿತದಿಂದಾಗಿ ಹಲವಾರು ಷೇರುದಾರರು ಲಾಭ- ನಷ್ಟದ ರುಚಿ ಕಾಣುವಂತಾಗಿದೆ.
ಕಚ್ಚಾತೈಲ ದರ: ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.13 ಪ್ರತಿಶತದಷ್ಟು ಕುಸಿದು 111 ಡಾಲರ್ಗೆ ತಲುಪಿದೆ.
ರೂಪಾಯಿ ದರ: ಡಾಲರ್ ಎದುರು ರೂಪಾಯಿ ದರ ಸತತ ಕುಸಿತದ ಮಧ್ಯೆ ಅತ್ಯಲ್ಪ ಅಂದರೆ 9 ಪೈಸೆ ಏರಿಕೆ ದಾಖಲಿಸಿದೆ. ಕಳೆದ ಬುಧವಾರ ಡಾಲರ್ ಎದುರು 79.03 ಕ್ಕೆ ಕುಸಿದಿದ್ದ ರೂಪಾಯಿ ದಿನದ ಬಳಿಕ 78.94 ರೂಪಾಯಿಗೆ ಏರಿಕೆ ಕಂಡು 9 ಪೈಸೆಯಷ್ಟು ಸುಧಾರಣೆ ಕಂಡಿತ್ತು.
ಇದನ್ನೂ ಓದಿ: ಶೇ.50 ರಷ್ಟು ವಿಮಾನ ಹಾರಾಟ ನಿಲ್ಲಿಸಿದ್ದ ಇಂಡಿಗೋ, ಕಾರಣ?