ನವದೆಹಲಿ: ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ಸೋಮವಾರ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮಧ್ಯಂತರ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 0.7 ರಷ್ಟು ಅಂದರೆ ಶೇಕಡಾ 6.2 ಕ್ಕೆ ಹೆಚ್ಚಿಸಿದೆ. ಹಾಗೆಯೇ 10 ಉದಯೋನ್ಮುಖ ಆರ್ಥಿಕತೆಗಳ ಬೆಳವಣಿಗೆ ಅಂದಾಜನ್ನು ಹಿಂದಿನ ಶೇಕಡಾ 4.3 ರಿಂದ ಶೇಕಡಾ 4 ಕ್ಕೆ ಇಳಿಸಿದೆ.
"ಚೀನಾದ ಪೂರೈಕೆ ವಲಯದ ಬೆಳವಣಿಗೆಯ ಸಾಮರ್ಥ್ಯದ ಅಂದಾಜಿನಲ್ಲಿ ಶೇಕಡಾ 0.7 ರಷ್ಟು ದೊಡ್ಡ ಕುಸಿತವು ಈ ಕಡಿತಕ್ಕೆ ಮುಖ್ಯ ಕಾರಣವಾಗಿದೆ" ಎಂದು ಫಿಚ್ ತನ್ನ ವರದಿಯಲ್ಲಿ ತಿಳಿಸಿದೆ. ಚೀನಾದ ಮಧ್ಯಂತರ ಬೆಳವಣಿಗೆ ಮುನ್ಸೂಚನೆಯನ್ನು ಹಿಂದಿನ ಶೇಕಡಾ 5.3 ರಿಂದ ಶೇಕಡಾ 4.6 ಕ್ಕೆ ಇಳಿಸಲಾಗಿದೆ.
"ಆದಾಗ್ಯೂ ನಾವು ಭಾರತ ಮತ್ತು ಮೆಕ್ಸಿಕೊ ವಿಷಯದಲ್ಲಿ ದೊಡ್ಡ ಬದಲಾವಣೆ ಮಾಡಿದ್ದೇವೆ, ಬಂಡವಾಳ-ಕಾರ್ಮಿಕ ಅನುಪಾತದ ಉತ್ತಮ ದೃಷ್ಟಿಕೋನದಿಂದ ಮೆಕ್ಸಿಕೊ ಪ್ರಯೋಜನ ಪಡೆಯುತ್ತಿದೆ. ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಶೇ 5.5ರಿಂದ ಶೇ 6.2ಕ್ಕೆ ಮತ್ತು ಮೆಕ್ಸಿಕೋದ ಜಿಡಿಪಿ ಬೆಳವಣಿಗೆ ಅಂದಾಜು ಶೇ 1.4ರಿಂದ ಶೇ 2ಕ್ಕೆ ಏರಿಕೆಯಾಗಿದೆ. ಹಾಗೆಯೇ ಜಿಡಿಪಿ ಬೆಳವಣಿಗೆ ಅಂದಾಜು ರಷ್ಯಾದಲ್ಲಿ ಶೇ 1.6ರಿಂದ ಶೇ 0.8ಕ್ಕೆ, ಕೊರಿಯಾದಲ್ಲಿ ಶೇ 2.3ರಿಂದ ಶೇ 2.1ಕ್ಕೆ, ದಕ್ಷಿಣ ಆಫ್ರಿಕಾದಲ್ಲಿ ಶೇ 1.2ರಿಂದ ಶೇ 1ಕ್ಕೆ ಇಳಿಕೆಯಾಗಿದೆ." ಎಂದು ಫಿಚ್ ತಿಳಿಸಿದೆ.
ಬ್ರೆಜಿಲ್ ಮತ್ತು ಪೋಲೆಂಡ್ ಹೊರತುಪಡಿಸಿ ಎಲ್ಲ ಅಗ್ರ 10 ಉದಯೋನ್ಮುಖ ದೇಶಗಳ (ಇಎಂ 10) ಇತ್ತೀಚಿನ ಜಿಡಿಪಿ ಅಂದಾಜುಗಳು ಸಾಂಕ್ರಾಮಿಕ ಪೂರ್ವ ಸಂಭಾವ್ಯ ಬೆಳವಣಿಗೆಯ ಅಂದಾಜುಗಳಿಗಿಂತ ಕೆಳಗಿವೆ ಎಂದು ಸಂಸ್ಥೆ ಹೇಳಿದೆ. ಫಿಚ್ ರೇಟಿಂಗ್ಸ್ ಇದು ನ್ಯೂಯಾರ್ಕ್ ಮತ್ತು ಲಂಡನ್ ಮೂಲದ ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿದೆ. ಯಾವ ಹೂಡಿಕೆಗಳು ಡೀಫಾಲ್ಟ್ ಆಗುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಹೆಚ್ಚಿನ ಆದಾಯ ತರಬಲ್ಲವು ಎಂಬುದನ್ನು ನಿರ್ಧರಿಸಲು ಹೂಡಿಕೆದಾರರು ಫಿಚ್ ರೇಟಿಂಗ್ಗಳನ್ನು ಬಳಸಿಕೊಳ್ಳುತ್ತಾರೆ.
ಫಿಚ್ ದೇಶಗಳಿಗೂ ಕ್ರೆಡಿಟ್ ರೇಟಿಂಗ್ ಗಳನ್ನು ನೀಡುತ್ತದೆ. ಪ್ರತಿ ರಾಷ್ಟ್ರವು ತನ್ನ ಸಾಲದ ಬಾಧ್ಯತೆಗಳನ್ನು ಪೂರೈಸುವ ಸಾಮರ್ಥ್ಯದ ಬಗ್ಗೆ ರೇಟಿಂಗ್ ಮಾಹಿತಿ ನೀಡುತ್ತದೆ. ದೇಶಗಳ ಕ್ರೆಡಿಟ್ ರೇಟಿಂಗ್ ಗಳು ಹೂಡಿಕೆದಾರರಿಗೆ ಲಭ್ಯವಿದ್ದು, ನಿರ್ದಿಷ್ಟ ದೇಶದಲ್ಲಿ ಹೂಡಿಕೆ ಮಾಡುವಾಗ ಅಪಾಯದ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ದೇಶಾದ್ಯಂತ ಬ್ಯಾಟರಿ ಸ್ವ್ಯಾಪಿಂಗ್ ಕೇಂದ್ರ ಆರಂಭಿಸಲಿದೆ ಗೊಗೊರೊ; ಎಚ್ಪಿಸಿಎಲ್ನೊಂದಿಗೆ ಒಪ್ಪಂದ