ಬೆಂಗಳೂರು: ವೃತ್ತಿಜೀವನದಿಂದ ಬೇಗನೆ ರಿಟೈರಾಗುವುದು ಐಟಿ ವಲಯದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆಗುತ್ತಿದೆ. ಐಟಿ ಉದ್ಯೋಗಿಗಳು ಪ್ರತಿ ತಿಂಗಳು ಕೈತುಂಬಾ ಗಳಿಸುವುದರಿಂದ ಸಾಕಷ್ಟು ಉಳಿತಾಯ ಮಾಡಿ ಬೇಗನೇ ರಿಟೈರಾಗಬಹುದು.
60 ನೇ ವಯಸ್ಸಿನಲ್ಲಿ ರಿಟೈರ್ ಆಗುವುದು ನಮಗೆಲ್ಲ ಗೊತ್ತಿದೆ. 60 ರ ನಂತರ ಪೆನ್ಷನ್ ಪಡೆದು ಆರಾಮವಾಗಿರುವುದು ಬಹುತೇಕರ ಅಭಿಲಾಷೆಯಾಗಿರುತ್ತದೆ. ಆದರೆ ರಿಟೈರ್ಮೆಂಟ್ ನಂತರ ನಿಜವಾಗಿಯೂ ನಾವು ಅಂದುಕೊಂಡ ಹಾಗೆ ಬದುಕುವುದು ಸಾಧ್ಯವೇ? ಬರುವ ಪೆನ್ಷನ್ ಸಾಕಾಗದಿದ್ದರೆ ಮತ್ತೆಲ್ಲೋ ಕೆಲಸ ಮಾಡಬೇಕು ಅಥವಾ ಬಿಸಿನೆಸ್ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಒಂದೇ ದಾರಿ .. ಅದು ಬೇಗನೇ ರಿಟೈರಾಗುವುದು.
ರಿಟೈರ್ಮೆಂಟಿಗೆ ನಿರ್ದಿಷ್ಟ ವಯಸ್ಸೇನೂ ಇಲ್ಲ. ಮುಂದಿನ ಜೀವನಕ್ಕೆ ಸಾಕಾಗುವಷ್ಟು ದುಡ್ಡಿದೆ ಅಥವಾ ಆದಾಯದ ಮೂಲವಿದೆ ಅಂದರೆ ನಾವು ಯಾವುದೇ ವಯಸ್ಸಿನಲ್ಲಾದರೂ ರಿಟೈರ್ ಆಗಬಹುದು. ಯಾವುದೇ ಕೆಲಸ ಮಾಡದೆ ಹಾಯಾಗಿ ಜೀವನ ನಡೆಸಬಹುದು.
ಹಣಕಾಸು ಸ್ವಾತಂತ್ರ್ಯ: ಹಣಕಾಸು ಸ್ವಾತಂತ್ರ್ಯವಿದ್ದರೆ ಬೇಗನೇ ರಿಟೈರಾಗಬಹುದು ಎಂಬುದು ಸದ್ಯದ ಮಾತು. ನೀವು 40 ನೇ ವಯಸ್ಸಿಗೆ ಹಣಕಾಸು ಸ್ವಾತಂತ್ರ್ಯ ಗಳಿಸಿದರೆ ಆಗಲೇ ನೀವು ರಿಟೈರಾಗಬಹುದು. ಆದರೆ ಹೀಗೆ ಹಣಕಾಸು ಸ್ವಾತಂತ್ರ್ಯ ಗಳಿಸಬೇಕಾದರೆ ಕರಾರುವಾಕ್ ಆದ ಹಣಕಾಸು ಪ್ಲಾನಿಂಗ್ ಮಾತ್ರ ಅಗತ್ಯ. ಇದಕ್ಕಾಗಿ ನೀವು ಗಳಿಸುವ ಆದಾಯದ ಶೇ 50 ರಿಂದ 70 ರಷ್ಟನ್ನು ಉಳಿತಾಯ ಮಾಡಬೇಕು. ಖರ್ಚು ಮಾಡುವಾಗ ತುಂಬಾ ಹಿಡಿತವಿರಬೇಕು. ಜಾಣತನದಿಂದ ಹೂಡಿಕೆ ಮಾಡಬೇಕು. ಇದಕ್ಕಾಗಿ ಒಂದಿಷ್ಟು ಗಣಿತ ತಿಳಿಯೋಣ ಬನ್ನಿ.
ರಿಟೈರ್ಮೆಂಟ್ ನಂತರ ನಿಮಗೆಷ್ಟು ಹಣ ಬೇಕು? ಯಾವಾಗ ನೀವು ರಿಟೈರಾಗಲು ಬಯಸುವಿರಿ?: ಈ ಎರಡು ಪ್ರಶ್ನೆಗಳಿಗೆ ಮುಖ್ಯವಾಗಿ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಇದರಲ್ಲಿ ಎರಡನೆಯ ಪ್ರಶ್ನೆಯ ಉತ್ತರ ಸುಲಭವಾಗಿದೆ ಎನಿಸುತ್ತದೆ. ಇರಲಿ.. ಮೊದಲನೆಯ ಪ್ರಶ್ನೆಗೆ ಉತ್ತರವೇನು ನೋಡೋಣ.
ರಿಟೈರ್ಮೆಂಟ್ ನಂತರ ಎಷ್ಟು ಹಣ ಬೇಕು ಎಂಬುದು ಪ್ರತಿ ತಿಂಗಳು ಎಷ್ಟು ಖರ್ಚು ಮಾಡುತ್ತೀರಿ ಎಂಬುದರ ಮೇಲೆ ಆಧರಿಸಿದೆ. ಇದನ್ನು 4 ಪರ್ಸೆಂಟ್ ರೂಲ್ ಮೂಲಕ ತಿಳಿಯಬಹುದು. ನೀವು 5 ಕೋಟಿ ರೂಪಾಯಿಗಳನ್ನಿಟ್ಟುಕೊಂಡು ರಿಟೈರಾಗುವಿರಿ ಎಂದುಕೊಳ್ಳೋಣ. ಅಂದರೆ ನೀವು ಪ್ರತಿ ವರ್ಷ 20 ಲಕ್ಷ ರೂಪಾಯಿ ಅಥವಾ ಶೇ 4 ಅಂದರೆ 25 ಪಟ್ಟಿನಷ್ಟು ಖರ್ಚು ಮಾಡಬಹುದು. ಅಂದರೆ ವರ್ಷಕ್ಕೆ ನಿಮ್ಮ ಖರ್ಚಿಗೆ ಎಷ್ಟು ಹಣದ ಅಗತ್ಯವಿದೆಯೋ ಅದರ 25 ಪಟ್ಟಿನಷ್ಟು ನಿಧಿಯೊಂದಿಗೆ ನೀವು ರಿಟೈರಾಗಬೇಕು ಎಂದರ್ಥ. ಇನ್ನು ಹಣದುಬ್ಬರವನ್ನೂ ಗಣನೆಗೆ ತೆಗೆದುಕೊಂಡರೆ ಈ ಮೊತ್ತ ಇನ್ನೂ ಹೆಚ್ಚಾಗುತ್ತದೆ. ಇನ್ನೊಂದು ವಿಚಾರ ಏನೆಂದರೆ, ನೀವು ರಿಟೈರ್ಮೆಂಟಿಗೆ ಉಳಿಸಿದ ಹಣವನ್ನು ವರ್ಷಕ್ಕೆ ಶೇ 7 ರಷ್ಟು ಬಡ್ಡಿ ಬರುವ ಹಾಗೆ ಹೂಡಿಕೆ ಮಾಡಿರಬೇಕಾಗುತ್ತದೆ. ಆಗ ಮಾತ್ರ ಲೆಕ್ಕಾಚಾರ ಸರಿಹೊಂದುತ್ತದೆ.
ಆದಾಯ ಹೆಚ್ಚಿಸಿಕೊಳ್ಳಿ: ಪ್ರತಿ ತಿಂಗಳು ಆದಾಯದ ಶೇ 50 ರಿಂದ 70 ರಷ್ಟು ಉಳಿತಾಯ ಮಾಡುವುದೆಂದರೆ ಬಲು ಕಷ್ಟದ ವಿಚಾರ. ಸಾಮಾನ್ಯವಾಗಿ ನಾವು ಉಳಿತಾಯ ಮಾಡುವ ಶೇ 15 ರಿಂದ 20 ಕ್ಕೆ ಹೋಲಿಸಿದರೆ ಇದು ಬಹಳ ದೊಡ್ಡ ಮೊತ್ತವಾಗುತ್ತದೆ. ಪ್ರತಿ ತಿಂಗಳು ಮನೆ ಬಾಡಿಗೆ, ಆಹಾರ, ಮಕ್ಕಳ ಶಾಲೆ ಫೀಸು ಹೀಗೆ ಸಾಕಷ್ಟು ಖರ್ಚಿರುವವರು ಶೇ 50 ರಿಂದ 70 ರಷ್ಟು ಉಳಿತಾಯ ಮಾಡುವುದು ಕಷ್ಟ. ಆದರೆ ಒಂದೋ ಹೀಗೆ ಮಾಡಲು ಪ್ರಯತ್ನಿಸಬೇಕು ಅಥವಾ ಆದಾಯವನ್ನೇ ಹೆಚ್ಚು ಮಾಡಿಕೊಳ್ಳಬೇಕು. ಹೀಗಾಗಿಯೇ ವಯಸ್ಸಿರುವಾಗ ಕಷ್ಟಪಟ್ಟು ದುಡಿಯಬೇಕು ಅಂತಾರೆ.
ಪಾರ್ಟ್ ಟೈಂ ಕೆಲಸ ಮಾಡುವುದು, ಹೆಚ್ಚಿನ ಸಂಬಳ ಸಿಗುತ್ತದೆ ಎಂದರೆ ಆಗಾಗ ಕಂಪನಿಗಳನ್ನು ಬದಲಾಯಿಸುವುದು, ಹೊಸ ಕೌಶಲಗಳನ್ನು ಕಲಿಯುವುದು ಹೀಗೆ ಏನೇ ಮಾಡಿದರೂ ಸರಿ.. ಆದಾಯ ಹೆಚ್ಚಾಗುವಂತೆ ನೋಡಿಕೊಳ್ಳಲೇಬೇಕು.
ಸುಖ ತ್ಯಜಿಸಲು ತಯಾರಾಗಿ: ಬೇಗನೇ ರಿಟೈರಾಗುವ ಟ್ರೆಂಡ್ 2010 ನಂತರ ಸಾಕಷ್ಟು ಜನಪ್ರಿಯವಾಗುತ್ತಿದೆ. ತಮ್ಮ ಮೂವತ್ತನೇ ವಯಸ್ಸಿನಿಂದ ಕೆಲವರು ಬೇಗನೇ ರಿಟೈರಾಗುವ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ಇದಕ್ಕಾಗಿ ನಿಮ್ಮ ಬಹುತೇಕ ಎಲ್ಲ ಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಇನ್ನು ಉಳಿಸಿದ ಹಣವನ್ನು ಹೇಗೆ ಇನ್ವೆಸ್ಟ್ ಮಾಡಬೇಕು ಎಂಬುದು ಸಹ ಗೊತ್ತಿರಬೇಕು.