ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿನ ಹಣದ ಮೇಲಿನ ಬಡ್ಡಿ ದರವನ್ನು (EPFO Interest rate) ಅಂತಿಮಗೊಳಿಸಲಾಗಿದೆ. 2022-23ನೇ ಹಣಕಾಸು ವರ್ಷಕ್ಕೆ ಶೇ 8.15 ಬಡ್ಡಿ ನೀಡಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಸಂಬಂಧ ಇಪಿಎಫ್‌ಒ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.
ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) 2022-23ರ ಹಣಕಾಸು ವರ್ಷಕ್ಕೆ ಶೇ 8.15 ಬಡ್ಡಿಯನ್ನು (ಇಪಿಎಫ್‌ಒ ಬಡ್ಡಿ ದರ) ನೀಡಲು ನಿರ್ಧರಿಸಿದೆ. 2021-22ರಲ್ಲಿ ನೀಡಲಾದ ಶೇ 8.10 ಕ್ಕೆ ಹೋಲಿಸಿದರೆ ಇದು 0.05% ಹೆಚ್ಚಾಗಿದೆ. ಸಿಬಿಟಿ ಈ ನಿರ್ಧಾರವನ್ನು ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಿತ್ತು. ಇತ್ತೀಚೆಗಷ್ಟೇ ಇಪಿಎಫ್‌ಒ ಬಡ್ಡಿದರದ ಕುರಿತು ಹಣಕಾಸು ಇಲಾಖೆಯು ಅನುಮತಿ ನೀಡಿದ ಬಳಿಕ ಘೋಷಣೆ ಮಾಡಿದೆ. ಕೇಂದ್ರದ ಅನುಮೋದನೆಯೊಂದಿಗೆ, ಇಪಿಎಫ್‌ಒ ಕ್ಷೇತ್ರ ಅಧಿಕಾರಿಗಳು ಶೀಘ್ರದಲ್ಲೇ ಈ ಮೊತ್ತದ ಬಡ್ಡಿಯನ್ನು 6 ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಿದ್ದಾರೆ.
40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರ: ಗಮನಾರ್ಹವಾಗಿ, 2021-22 ರ ಹಣಕಾಸು ವರ್ಷಕ್ಕೆ, ಇಪಿಎಫ್‌ಒ ಇಪಿಎಫ್ ಖಾತೆಗೆ ಬಡ್ಡಿ ದರವನ್ನು ಶೇಕಡಾ 8.10 ಕ್ಕೆ ನಿಗದಿಪಡಿಸಿದೆ. ಇದು ಸುಮಾರು 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. 2020-21 ರ ಇಪಿಎಫ್ ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (CBT) ಮಾರ್ಚ್ 2021 ರಲ್ಲಿ ನಿರ್ಧರಿಸಿತ್ತು. ಇದನ್ನು ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿತ್ತು. ನಂತರ ಇಪಿಎಫ್ಓ ಕ್ಷೇತ್ರ ಕಚೇರಿಗಳಿಗೆ ಕ್ರೆಡಿಟ್ ಮಾಡಲು ನಿರ್ದೇಶನಗಳನ್ನು ನೀಡಿತ್ತು. 2018-19 ರಲ್ಲಿ ನೀಡಲಾಗುತ್ತಿದ್ದ ಶೇಕಡಾ 8.65 ಬಡ್ಡಿದರವನ್ನು 2019-20ರಲ್ಲಿ 8.5 ಕ್ಕೆ ಇಳಿಸಿದೆ. ಇನ್ನು ಈ ಹಿಂದೆ ಹೋದರೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು 8.8 ಇತ್ತು. ಹಾಗೆ 2013-14 ಮತ್ತು 2014-15 ರಲ್ಲಿ 8.75 ಪರ್ಸೆಂಟ್ ಬಡ್ಡಿದರವನ್ನು ನೀಡಲಾಗುತ್ತಿತ್ತು. 2012-13 ರಲ್ಲಿ 8.5 ಬಡ್ಡಿ ಮತ್ತು 2011-12ರಲ್ಲಿ ಶೇ.8.25 ಬಡ್ಡಿಯನ್ನು ಉದ್ಯೋಗಿಗಳಿಗೆ ನೀಡಲಾಗಿದೆ.
ಉದ್ಯೋಗಿಯ ಸಂಬಳದಿಂದ ಕಡಿತ: ಉದ್ಯೋಗಿಯ ವೇತನದಲ್ಲಿ ಶೇ 12 ಕಡಿತಗೊಳಿಸಿ ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಉದ್ಯೋಗಿಯ ವೇತನದಲ್ಲಿ ಉದ್ಯೋಗದಾತರು ಮಾಡಿದ ಕಡಿತದ 8.33 ಪ್ರತಿಶತವು ಇಪಿಎಸ್ (ನೌಕರ ಪಿಂಚಣಿ ಯೋಜನೆ) ಗೆ ತೆಗೆದುಕೊಳ್ಳಲಾಗುತ್ತದೆ. ಆದರೆ 3.67 ಪ್ರತಿಶತವು ಇಪಿಎಫ್ಗೆ ನಿಗದಿಪಡಿಸಲಾಗುವುದು. ನಿಮ್ಮ ಪಿಎಫ್ ಖಾತೆಯ ಪ್ರಸ್ತುತ ಬ್ಯಾಲೆನ್ಸ್ ಅನ್ನು ನೀವು ಮನೆಯಲ್ಲಿಯೇ ಕುಳಿತು ಸುಲಭ ರೀತಿಯಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ ನೀವು ಇಪಿಎಫ್ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಅಥವಾ ನೀವು ಉಮಾಂಗ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ನಿಮ್ಮ ಮೊಬೈಲ್ ಫೋನ್‌ನಿಂದ SMS ಕಳುಹಿಸುವ ಮೂಲಕ ಕಂಡುಕೊಳ್ಳಬಹುದು. ದೇಶಾದ್ಯಂತ ಸುಮಾರು 6.5 ಕೋಟಿ ಇಪಿಎಫ್‌ಒ ಚಂದಾದಾರರಿದ್ದಾರೆ.
ಓದಿ: EPFO Interest rate: ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರ ಶೇ.8.15 ರಷ್ಟು ನಿಗದಿ