ನವದೆಹಲಿ: ಪಿಎಫ್ ಠೇವಣಿದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಶುಭ ಸುದ್ದಿ ನೀಡಿದೆ. ಇಂದು ನಡೆದ ಸಭೆಯಲ್ಲಿ 2022- 23 ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15 ರಷ್ಟು ನಿಗದಿಪಡಿಸಿದೆ. ಕಳೆದ ವರ್ಷ 8.1ಕ್ಕೆ ಇಳಿಕೆ ಮಾಡಿದ್ದ ಬಡ್ಡಿ ದರದಲ್ಲಿ 14 ಪ್ರತಿಶತ ಏರಿಕೆ ಮಾಡಲಾಗಿದೆ.
2022 ರಲ್ಲಿ ಮಾರ್ಚ್ನಲ್ಲಿ ಘೋಷಿಸಿದಂತೆ ಇಪಿಎಫ್‌ಒ ತನ್ನ ಸುಮಾರು 5 ಕೋಟಿ ಠೇವಣಿದಾರರ ನಿಧಿಯ ಬಡ್ಡಿದರವನ್ನು ಇಳಿಸಿತ್ತು. ಇದು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೂ ಮೊದಲು ಅಂದರೆ 2020 -21 ರಲ್ಲಿ ಪಿಎಫ್ ಬಡ್ಡಿ ದರ ಶೇ 8.5 ರಷ್ಟಿತ್ತು. ಇದು 2021- 22 ರಲ್ಲಿ 8.1 ಕ್ಕೆ ಇಳಿಕೆಯಾಗಿತ್ತು. ಈ ಪ್ರಮಾಣ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿತ್ತು. 1977- 78ರಲ್ಲಿ ಇಪಿಎಫ್ ಬಡ್ಡಿ ದರ ಶೇ.8 ರಷ್ಟು ನಿಗದಿ ಮಾಡಲಾಗಿತ್ತು. ಇದಾದ ಬಳಿಕ ಕಳೆದ ವರ್ಷವೇ ಅತ್ಯಂತ ಕಡಿಮೆ ಬಡ್ಡಿ ದರ ನೀಡಲಾಗಿತ್ತು.
ಇದೀಗ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಠೇವಣಿಗಳ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟ್ (ಸಿಬಿಟಿ) ಮಂಗಳವಾರ ನಡೆಸಿದ ಸಭೆಯಲ್ಲಿ 2022-23ಕ್ಕೆ ಅನ್ವಯವಾಗುವಂತೆ ಇಪಿಎಫ್‌ಗೆ ಶೇ 8.15 ರಷ್ಟು ಬಡ್ಡಿದರ ಒದಗಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ..: ಸಮುದ್ರದ ಅಲೆಗಳ ವಿರುದ್ಧ 16 ಕಿಮೀ ಈಜಿದ IPS ಅಧಿಕಾರಿ
EPF ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳದ ಸಿಬಿಟಿಯ ನಿರ್ಧಾರದ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಸರ್ಕಾರ ಇದಕ್ಕೆ ಅನುಮೋದನೆಯ ನೀಡಿದ ಬಳಿಕ, 2022-23 ರ EPF ಮೇಲಿನ ಬಡ್ಡಿ ದರವನ್ನು ಐದು ಕೋಟಿಗೂ ಹೆಚ್ಚು ಠೇವಣಿದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಈ ಹಿಂದಿನ ವರ್ಷಗಳ ಬಡ್ಡಿದರ ಹೇಗಿತ್ತು?: ಭವಿಷ್ಯ ನಿಧಿ ಠೇವಣಿಗಳ ಮೇಲೆ 2018-19 ರಲ್ಲಿ ನೀಡಲಾಗಿದ್ದ 8.65 ಬಡ್ಡಿ ದರವನ್ನು 2019-20ಕ್ಕೆ ಅನ್ವಯವಾಗುವಂತೆ 8.5 ಪ್ರತಿಶತಕ್ಕೆ ಇಳಿಸಿತ್ತು. ಇದು ಏಳು ವರ್ಷಗಳ ಕನಿಷ್ಠವಾಗಿತ್ತು. ಇದಾದ ಬಳಿಕ 2020- 21 ರಲ್ಲಿ 8.1 ಪ್ರತಿಶತ ಬಡ್ಡಿದರ ನೀಡಲಾಗಿತ್ತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು ಶೇಕಡಾ 8.8 ನೀಡಲಾಗಿತ್ತು.
ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ 8.75 ರಷ್ಟು ಬಡ್ಡಿದರವನ್ನು ನೀಡಿತ್ತು. ಇದು ಈವರೆಗಿನ ಉತ್ತಮ ಬಡ್ಡಿದರವಾಗಿದೆ. ಇದು 2012-13 ಕ್ಕೆ 8.5 ಶೇಕಡಾ ನೀಡಲಾಗಿತ್ತು. 2011- 12 ರಲ್ಲಿ ಬಡ್ಡಿ ದರ ಶೇ.8.25 ರಷ್ಟಿತ್ತು.
ಇದನ್ನೂ ಓದಿ: ಚೀನಾ ಪೌರೋಹಿತ್ಯದಲ್ಲಿ ಹಗೆತನ ಮರೆತು ಇರಾನ್-ಸೌದಿ ದೋಸ್ತಿ: ಭಾರತದ ಮೇಲೆ ಪ್ರಭಾವವೇನು?