ನವದೆಹಲಿ: ಹೀರೋ ಮೋಟೊಕಾರ್ಪ್ ಬೆಂಬಲಿತ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿ ಅಥೆರ್ ಎನರ್ಜಿಯ ನಷ್ಟ 2022-23ರ ಆರ್ಥಿಕ ವರ್ಷದಲ್ಲಿ 2.5 ಪಟ್ಟು ಹೆಚ್ಚಾಗಿದೆ. ಕಂಪನಿಗಳ ರಿಜಿಸ್ಟ್ರಾರ್ (ಆರ್ಓಸಿ) ಗೆ ಸಲ್ಲಿಸಿದ ವಾರ್ಷಿಕ ಹಣಕಾಸು ವರದಿಯ ಪ್ರಕಾರ, ಇವಿ ಸ್ಟಾರ್ಟ್ಅಪ್ ಅಥೆರ್ ಎನರ್ಜಿ 2023 ರ ಹಣಕಾಸು ವರ್ಷದಲ್ಲಿ 864.5 ಕೋಟಿ ರೂ.ಗಳ ನಷ್ಟವಾಗಿದೆ ಎಂದು ತಿಳಿಸಿದೆ.
ಉತ್ತಮ ಮಾರಾಟದ ಹೊರತಾಗಿಯೂ ಅಥೆರ್ನ ಒಟ್ಟು ವೆಚ್ಚಗಳು 2022 ರ ಹಣಕಾಸು ವರ್ಷದಲ್ಲಿ 757.9 ಕೋಟಿ ರೂ.ಗಳಿಂದ 2,670.6 ಕೋಟಿ ರೂ.ಗೆ ಮೂರು ಪಟ್ಟು ಹೆಚ್ಚಾಗಿವೆ. ಮಾರ್ಚ್ 2023 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಗಳಿಂದ ಸಂಸ್ಥೆಯ ಆದಾಯವು 4.3 ಪಟ್ಟು ಏರಿಕೆಯಾಗಿ 1,784 ಕೋಟಿ ರೂ.ಗೆ ತಲುಪಿದ್ದರೂ, ನಷ್ಟದ ಪ್ರಮಾಣ ಕೂಡ ಏರಿಕೆಯಾಗಿದೆ.
ವರದಿಗಳ ಪ್ರಕಾರ, ಕಂಪನಿಯು 2023 ರ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಗಳಿಂದ ಪ್ರತಿ 1 ರೂ.ಗಳನ್ನು ಗಳಿಸಲು 1.5 ರೂ.ಗಳನ್ನು ಖರ್ಚು ಮಾಡಿದೆ. ಆದರೆ ಇಬಿಐಟಿಡಿಎ ಮಾರ್ಜಿನ್ -38.3 ಪ್ರತಿಶತಕ್ಕೆ ಸುಧಾರಿಸಿದೆ.
ಈ ತಿಂಗಳ ಆರಂಭದಲ್ಲಿ ಎಲೆಕ್ಟ್ರಿಕ್ ವಾಹನ ಕಂಪನಿ ಅಥೆರ್, ಅಸ್ತಿತ್ವದಲ್ಲಿರುವ ಷೇರುದಾರರಾದ ಹೀರೋ ಮೋಟೊಕಾರ್ಪ್ ಮತ್ತು ಜಾಗತಿಕ ಹೂಡಿಕೆ ಸಂಸ್ಥೆ ಜಿಐಸಿಯಿಂದ ರೈಟ್ಸ್ ಇಶ್ಯೂ ಮೂಲಕ 900 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಈ ಹಣವನ್ನು ಹೊಸ ಉತ್ಪನ್ನ ಬಿಡುಗಡೆ ಮತ್ತು ತನ್ನ ಚಾರ್ಜಿಂಗ್ ಮೂಲಸೌಕರ್ಯ ಮತ್ತು ರಿಟೇಲ್ ಜಾಲದ ವಿಸ್ತರಣೆಗೆ ಬಳಸಲು ಯೋಜಿಸಿದೆ ಎಂದು ಅಥೆರ್ ಹೇಳಿದೆ.
ಪ್ರಸ್ತುತ, ಅಥೆರ್ ಎನರ್ಜಿ 100 ಕ್ಕೂ ಹೆಚ್ಚು ನಗರಗಳಲ್ಲಿ 200 ಕ್ಕೂ ಹೆಚ್ಚು ಚಿಲ್ಲರೆ ಟಚ್ ಪಾಯಿಂಟ್ ಗಳನ್ನು ಹೊಂದಿದೆ ಮತ್ತು 1,500 ಕ್ಕೂ ಹೆಚ್ಚು ಗ್ರಿಡ್ ಗಳನ್ನು ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ನೆಟ್ ವರ್ಕ್ ಅನ್ನು ಹೊಂದಿದೆ. ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಗಳಾದ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಅವರು 2013 ರಲ್ಲಿ ಸ್ಥಾಪಿಸಿದ ಅಥೆರ್ ಅನ್ನು ಹೀರೋ ಮೋಟೊಕಾರ್ಪ್, ಜಿಐಸಿ, ಎನ್ಐಐಎಫ್, ಸಚಿನ್ ಬನ್ಸಾಲ್ ಮತ್ತು ಟೈಗರ್ ಗ್ಲೋಬಲ್ ಬೆಂಬಲಿಸುತ್ತಿವೆ.
ಅಥೆರ್ ಎನರ್ಜಿ ಪ್ರಸ್ತುತ ಮುಂದಿನ ಹಣಕಾಸು ವರ್ಷದ ಅಂತ್ಯದ ಮೊದಲು ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಪ್ರಸ್ತುತ ಅಥೆರ್ ಎನರ್ಜಿ ರೂ.1.35 ಲಕ್ಷದಿಂದ ರೂ.1.65 ಲಕ್ಷಗಳ (ಎಕ್ಸ್ ಶೋರೂಂ) ಬೆಲೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಅಕಾಸಾ ಏರ್