ನವದೆಹಲಿ: ಹೀರೋ ಮೋಟೊ ಕಾರ್ಪ್ ಸಿಎಂಡಿ ಮತ್ತು ಅಧ್ಯಕ್ಷ ಪವನ್ ಮುಂಜಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೊಡ್ಡ ಪ್ರಮಾಣದ ಕೈಗೊಂಡಿದ್ದು, ದೆಹಲಿಯಲ್ಲಿರುವ ಅವರ 24.95 ಕೋಟಿ ರೂ. ಮೌಲ್ಯದ ಮೂರು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಂಜಾಲ್ ಅವರಿಗೆ ಸೇರಿದ ಮೂರು ಆಸ್ತಿಗಳನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಮುಂಜಾಲ್ ಅವರಿಗೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ "ವಿದೇಶಿ ವಿನಿಮಯ ಅಥವಾ ವಿದೇಶಿ ಕರೆನ್ಸಿ" ಕಳುಹಿಸಲಾಗಿದೆ ಮತ್ತು ನಂತರ ಅದನ್ನು ಅವರು ವಿದೇಶದಲ್ಲಿ ತಮ್ಮ ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ವಿವಿಧ ಉದ್ಯೋಗಿಗಳ ಹೆಸರಿನಲ್ಲಿ ಈವೆಂಟ್ ಮ್ಯಾನೇಜಮೆಂಟ್ ಕಂಪನಿಯೊಂದು ಅಧಿಕೃತ ವಿತರಕರಿಂದ ವಿದೇಶಿ ಕರೆನ್ಸಿ ಅಥವಾ ವಿದೇಶಿ ವಿನಿಮಯವನ್ನು ಪಡೆದುಕೊಂಡು ನಂತರ ಮುಂಜಾಲ್ ಅವರ ರಿಲೇಶನ್ಶಿಪ್ ಮ್ಯಾನೇಜರ್ಗೆ ಹಸ್ತಾಂತರಿಸಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ರಿಲೇಶನ್ಶಿಪ್ ಮ್ಯಾನೇಜರ್ ತನ್ನ ವೈಯಕ್ತಿಕ ಅಥವಾ ವ್ಯವಹಾರ ಸಂಬಂಧಿತ ಪ್ರವಾಸಗಳಲ್ಲಿ ಮುಂಜಾಲ್ ಅವರ ವೈಯಕ್ತಿಕ ವೆಚ್ಚಕ್ಕಾಗಿ ಅಂತಹ ವಿದೇಶಿ ಕರೆನ್ಸಿ ಅಥವಾ ವಿದೇಶಿ ವಿನಿಮಯವನ್ನು ನಗದು ಅಥವಾ ಕಾರ್ಡ್ ರೂಪದಲ್ಲಿ ರಹಸ್ಯವಾಗಿ ಸಾಗಿಸಿದ್ದಾರೆ ಎಂದು ಅದು ಹೇಳಿದೆ. "ಉದಾರೀಕೃತ ಹಣ ರವಾನೆ ಯೋಜನೆಯಡಿ ಪ್ರತಿ ವ್ಯಕ್ತಿಗೆ ವರ್ಷಕ್ಕೆ 2.5 ಲಕ್ಷ ಯುಎಸ್ ಡಾಲರ್ ಮಿತಿಯ ನಿಯಮವನ್ನು ತಪ್ಪಿಸಿ ಹಣ ಸಾಗಿಸಲು ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ" ಎಂದು ಇಡಿ ಹೇಳಿದೆ.
ಮುಂಜಾಲ್ ಮತ್ತು ಅವರಿಗೆ ಸಂಬಂಧಿತ ಸ್ಥಳಗಳು ಅಥವಾ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಇಡಿ ಈ ಹಿಂದೆ ಆಗಸ್ಟ್ 1 ರಂದು ಶೋಧ ಕಾರ್ಯಾಚರಣೆ ನಡೆಸಿತ್ತು ಮತ್ತು ಡಿಜಿಟಲ್ ಪುರಾವೆಗಳು ಮತ್ತು ಇತರ ದೋಷಾರೋಪಣೆ ದಾಖಲೆಗಳೊಂದಿಗೆ 25 ಕೋಟಿ ರೂ.ಗಳ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಮುಟ್ಟುಗೋಲು ಹಾಕಿಕೊಂಡ ಆಸ್ತಿಯ ಒಟ್ಟು ಮೌಲ್ಯ ಸುಮಾರು 50 ಕೋಟಿ ರೂ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಭಾರತದಿಂದ ವಿದೇಶಿ ವಿನಿಮಯ ಅಥವಾ ಕರೆನ್ಸಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಕ್ಕಾಗಿ ಮುಂಜಾಲ್ ಮತ್ತು ಇತರರ ವಿರುದ್ಧ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸಲ್ಲಿಸಿದ ಚಾರ್ಜ್ಶೀಟ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ. 54 ಕೋಟಿ ರೂ.ಗೆ ಸಮನಾದ ವಿದೇಶಿ ಕರೆನ್ಸಿ ಅಥವಾ ವಿದೇಶಿ ವಿನಿಮಯವನ್ನು ಭಾರತದಿಂದ ಅಕ್ರಮವಾಗಿ ಹೊರಗೆ ಕಳುಹಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದಿಂದ ನೇರವಾಗಿ ಅಮೆಜಾನ್ ಶಾಪಿಂಗ್; ಬರಲಿದೆ ಹೊಸ ವೈಶಿಷ್ಟ್ಯ