ನವದೆಹಲಿ : ಭಾರತದಲ್ಲಿ ಇ-ಕಾಮರ್ಸ್ ವಹಿವಾಟು ಮೌಲ್ಯವು 2022 ರಲ್ಲಿ ಇದ್ದ 83 ಶತಕೋಟಿ ಡಾಲರ್ಗಳಿಂದ 2026 ರಲ್ಲಿ ಸುಮಾರು 150 ಶತಕೋಟಿ ಡಾಲರ್ಗೆ ಶೇಕಡಾ 16 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಏರುವ ಸಾಧ್ಯತೆಯಿದೆ ಎಂದು ವರದಿಯೊಂದು ಬುಧವಾರ ಹೇಳಿದೆ. ಎಫ್‌ಐಎಸ್ ಗ್ಲೋಬಲ್ ಪೇಮೆಂಟ್ಸ್ ವರದಿ-2023 ರ ಪ್ರಕಾರ ಫಿಲಿಪೈನ್ಸ್, ಇಂಡೋನೇಷ್ಯಾ, ಭಾರತ, ಮಲೇಷ್ಯಾ ಮತ್ತು ವಿಯೆಟ್ನಾಂ 2026 ರ ವೇಳೆಗೆ ಎಪಿಎಸಿಯಲ್ಲಿ ಇ-ಕಾಮರ್ಸ್ ಬೆಳವಣಿಗೆಯನ್ನು ಮುನ್ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ.
"ಭಾರತವು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯೋಜನೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನೊಂದಿಗೆ ಮುಂದಿನ ಪೀಳಿಗೆಯ ನೈಜ ಸಮಯದ ಪಾವತಿ (real-time payments) ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಪೇಮೆಂಟ್ಸ್ ನಾಯಕನಾಗಿ ಹೊರಹೊಮ್ಮಿದೆ” ಎಂದು ವರದಿ ಹೇಳಿದೆ.
ಯುಪಿಐ ನ ಬೃಹತ್ ಯಶಸ್ಸು ಹೆಚ್ಚಾಗಿ Google Pay, Paytm ಮತ್ತು PhonePe ನಂತಹ ವಾಣಿಜ್ಯ ವ್ಯಾಲೆಟ್‌ಗಳೊಂದಿಗೆ ಅದರ ತಡೆರಹಿತ ಇಂಟರ್ ಆಪರೇಬಿಲಿಟಿಯಿಂದ ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ಜಾಗತಿಕ ಇ-ಕಾಮರ್ಸ್ ವಹಿವಾಟು ಮೌಲ್ಯವು 2022 ರಲ್ಲಿ ಇದ್ದ 6 ಟ್ರಿಲಿಯನ್ ಡಾಲರ್ಗಳಿಂದ 2026 ರಲ್ಲಿ 8.5 ಟ್ರಿಲಿಯನ್ ಡಾಲರ್ಗಳಿಗೆ ಶೇಕಡಾ 9 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಕೋವಿಡ್ ಅಲೆಯ ಮೊದಲ ಎರಡು ವರ್ಷಗಳಲ್ಲಿ ಉಂಟಾಗಿದ್ದ ಜಾಗತಿಕ ಇ-ಕಾಮರ್ಸ್‌ನ ಅಗಾಧ ಬೆಳವಣಿಗೆಯು 2022 ರಲ್ಲಿ ಸ್ವಲ್ಪಮಟ್ಟಿಗೆ ನಿಧಾನಗೊಂಡಿತ್ತು. 2021-2022 ರಿಂದ ಜಾಗತಿಕ ಇ ಕಾಮರ್ಸ್ ವಹಿವಾಟು ಮೌಲ್ಯದಲ್ಲಿ ಶೇಕಡಾ 10 ರಷ್ಟು ಬೆಳವಣಿಗೆಯಾಗಿದೆ. ಕೋವಿಡ್ನ ಆರಂಭಿಕ ಅವಧಿಗೆ ಹೋಲಿಸಿದರೆ ಕಡಿಮೆ ಬೆಳವಣಿಗೆ ದರಗಳ ಹೊರತಾಗಿಯೂ, ಜಾಗತಿಕ ಇ-ಕಾಮರ್ಸ್‌ನ ಮುನ್ಸೂಚನೆಯು ಸಕಾರಾತ್ಮಕವಾಗಿ ಮುಂದುವರೆದಿದೆ.
ಭಾರತದಲ್ಲಿ ವಾಣಿಜ್ಯ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ (DPIIT) ಉತ್ತೇಜನ ಇಲಾಖೆಯ ಉಪಕ್ರಮವಾದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಇ - ಕಾಮರ್ಸ್ ಕ್ರಾಂತಿಯನ್ನುಂಟುಮಾಡಲು ಅನುಕೂಲಕರ ಮಾದರಿಯನ್ನು ರಚಿಸಲು ರೂಪಿಸಲಾಗಿದೆ. ಆದಾಗ್ಯೂ, ಈ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಇನ್ನೂ ಕೆಲ ಸವಾಲುಗಳು ಉಳಿದಿವೆ. ಉದಾಹರಣೆಗೆ, ಕೆಲವು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಮತ್ತು ಹಣಕಾಸಿನ ಒಳಗೊಳ್ಳುವಿಕೆಯ ಕೊರತೆಯು ಇ-ಕಾಮರ್ಸ್ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ವರದಿ ಹೇಳಿದೆ.
ಪ್ರಾಥಮಿಕವಾಗಿ ಇಂಟರ್ನೆಟ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್ ಮೂಲಕ ಹಣ ಅಥವಾ ಡೇಟಾ ರವಾನೆಯ ಮೂಲಕ ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟಗಳನ್ನು ಇ-ಕಾಮರ್ಸ್ (ಎಲೆಕ್ಟ್ರಾನಿಕ್ ಕಾಮರ್ಸ್) ಎಂದು ಕರೆಯಲಾಗುತ್ತದೆ. ಈ ವ್ಯಾಪಾರ ವಹಿವಾಟುಗಳು ವ್ಯಾಪಾರದಿಂದ ವ್ಯಾಪಾರಕ್ಕೆ (B2B), ವ್ಯಾಪಾರದಿಂದ ಗ್ರಾಹಕನಿಗೆ (B2C), ಗ್ರಾಹಕರಿಂದ ಗ್ರಾಹಕ ಅಥವಾ ಗ್ರಾಹಕರಿಂದ ವ್ಯಾಪಾರಕ್ಕೆ ನಡೆಯುತ್ತವೆ.
ಇದನ್ನೂ ಓದಿ : El Nino ಛಾಯೆ; ಮಳೆ ಕೊರತೆ, ಉಷ್ಣಾಂಶ ಏರಿಕೆ: ಬರಗಾಲ ಸಾಧ್ಯತೆ