ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಜೆಟ್ ಮಂಡನೆಗೂ ಮೊದಲು ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಾಗಿದ್ದು, ಅಲ್ಲಿನ ಜನರ ತಲಾದಾಯ ಕಳೆದ ವರ್ಷಕ್ಕಿಂತ ಶೇ.14 ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ತಲಾದಾಯ 444,768 ಕೋಟಿ ರೂಪಾಯಿ ಆಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.
ದೆಹಲಿ ಸರ್ಕಾರ ಇಂದು ವಿಧಾನಸಭೆಯಲ್ಲಿ 2022-23 ರ ಆರ್ಥಿಕ ಸಮೀಕ್ಷೆಯ ಸ್ಥಿತಿಗತಿ ವರದಿಯನ್ನು ಮಂಡಿಸಿತು. 2022-23ರ ಅವಧಿಯಲ್ಲಿ ಜನರ ತಲಾ ಆದಾಯ ಏರಿಕೆ ಕಂಡುಬಂದಿದೆ. ಕಳೆದ ವರ್ಷ 3,89,529 ಕೋಟಿಯಷ್ಟಿದ್ದ ಆದಾಯ ಈ ವರ್ಷ 4,44,768 ರೂ.ಗೆ ತಲುಪಿದೆ. ಅಂದರೆ ಸುಮಾರು 14.18 ರಷ್ಟು ಹೆಚ್ಚಿದೆ ಎಂಬುದನ್ನು ವರದಿ ಕಂಡುಕೊಂಡಿದೆ. ಆರ್ಥಿಕ ಸಮೀಕ್ಷೆಯು ರಾಜ್ಯದ ಆರ್ಥಿಕತೆಗೆ ಸಂಬಂಧಿಸಿದ ಅಂಕಿಅಂಶಗಳ ಜೊತೆಗೆ ವಿವಿಧ ಇಲಾಖೆಗಳ ಪ್ರಗತಿಯನ್ನೂ ವಿವರಿಸಿದೆ. ವಾರ್ಷಿಕವಾಗಿ ತಯಾರಿಸುವ ಈ ವರದಿಯನ್ನು ಪ್ರತಿ ವರ್ಷ ಬಜೆಟ್ಗೂ ಮೊದಲು ಶಾಸಕಾಂಗದ ಮುಂದೆ ಮಂಡಿಸಲಾಗುತ್ತದೆ.
ಪ್ರಸ್ತುತ ದರ ಏರಿಕೆಯ ಮಧ್ಯೆ ದೆಹಲಿಯ ತಲಾ ಆದಾಯವು 2020-21 ರಲ್ಲಿದ್ದ 3,31,112 ಗೆ ಹೋಲಿಸಿದರೆ 2021-22 ರಲ್ಲಿ ಇದು 3,89,529 ಮಟ್ಟಕ್ಕೆ ತಲುಪಿತ್ತು. ಪ್ರಸ್ತುತ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ದೆಹಲಿಯ ತಲಾ ಆದಾಯ 2.6 ಪಟ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯಲ್ಲಿ ಹೇಳಿದಂತೆ ದೆಹಲಿಯು ಸೇವಾ ವಲಯವಾಗಿ ಗುರುತಿಸಿಕೊಂಡಿದೆ. 2022- 23ರ ಅವಧಿಯಲ್ಲಿ ಒಟ್ಟು ರಾಜ್ಯದ ಆದಾಯ ಪಾಲು 84.84 ರಷ್ಟು ಹೊಂದಿದೆ. ದ್ವಿತೀಯ ವಲಯದ ಕೊಡುಗೆ ಶೇ. 12.53 ಮತ್ತು ಪ್ರಾಥಮಿಕ ವಲಯ ಶೇ. 2.63 ರಷ್ಟಿದೆ. ಉದ್ಯೋಗ ಸೃಷ್ಟಿ ಮತ್ತು ರಾಜ್ಯದ ಆದಾಯಕ್ಕೆ ಕೊಡುಗೆ ನೀಡುವ ವಿಷಯದಲ್ಲಿ ಸೇವಾ ವಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ" ಎಂದು ಹೇಳಿದೆ.
ದೆಹಲಿಯ ಜಿಎಸ್‌ಡಿಪಿಯ ಮುಂಗಡ ಅಂದಾಜು 1,043,759 ಕೋಟಿ ರೂಪಾಯಿಗಳ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಇದು ಕಳೆದ ಸಾಲಿಗಿಂತ 15.38 ರಷ್ಟು ಬೆಳವಣಿಗೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಕೊರೊನಾ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನದಿಂದ ಆರ್ಥಿಕತೆಯು ಸಹಜ ಸ್ಥಿತಿಗೆ ಮರಳಿದೆ. ಇದಲ್ಲದೇ, ಸೇವಾ ವಲಯ, ಹೂಡಿಕೆಯಲ್ಲಿ ಹೆಚ್ಚಿನ ಚೇತರಿಕೆ ಕಂಡಿದೆ ಎಂದು ವರದಿ ಹೇಳಿದೆ.
ಆರ್ಥಿಕ ಚಟುವಟಿಕೆಯು ಕೊರೊನಾ ಸಾಂಕ್ರಾಮಿಕ ಪೂರ್ವಕ್ಕೆ ಹೋಲಿಸಿದರೆ ಹೆಚ್ಚು ವೇಗವಾಗಿ ಚೇತರಿಸಿಕೊಂಡಿದೆ. 2021-22 ಮತ್ತು 2022-23 ರ ಸಾಲಿನಲ್ಲಿ ದೆಹಲಿಯ GSDP ಮತ್ತು ಜಿಡಿಪಿ ಕ್ರಮವಾಗಿ 9.14 ಮತ್ತು 9.18 ರಷ್ಟು ಬೆಳವಣಿಗೆಯೊಂದಿಗೆ ವೇಗವಾಗಿ ಮುನ್ನಡೆಯುತ್ತಿದೆ ಎಂಬುದು ಸಮೀಕ್ಷೆಯ ಪ್ರಮುಖಾಂಶವಾಗಿದೆ.
ದೇಶದ ಆರ್ಥಿಕ ಸಮೀಕ್ಷೆಯಲ್ಲೇನಿದೆ: ದೇಶದ ಆರ್ಥಿಕತೆ ಬೆಳವಣಿಗೆ ದರವನ್ನು ಶೇ.6.5 ರಷ್ಟು ಸೂಚಿಸಿದ್ದ ಆರ್ಥಿಕ ಸಮೀಕ್ಷೆ, ನಿರುದ್ಯೋಗ ಸಮಸ್ಯೆಗೆ ಖಾಸಗಿ ವಲಯ ಬೂಸ್ಟರ್ ಆಗಲಿದೆ. ಈ ವರ್ಷ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆ ಕಂಡು ಖಾಸಗಿ ವಲಯ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ ಎಂದು ಹೇಳಿತ್ತು.
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ಈ ಸಮೀಕ್ಷೆಯನ್ನು ರೂಪಿಸಲಾಗಿತ್ತು. 2022-23 ನೇ(ಏಪ್ರಿಲ್ - ಮಾರ್ಚ್) ಸಾಲಿನ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ಇದು ಹೊಂದಿದೆ.