ನವದೆಹಲಿ: ಸೌದಿ ಅರೇಬಿಯಾ ತನ್ನ ಕಚ್ಚಾತೈಲ ಉತ್ಪಾದನೆಯ ಪ್ರಮಾಣ ಕಡಿತಗೊಳಿಸಿದ್ದು, ಈ ಕ್ರಮವನ್ನು ವರ್ಷಾಂತ್ಯದವರೆಗೆ ಮುಂದುವರಿಸುವುದಾಗಿ ಹೇಳಿದ ನಂತರ ತೈಲ ಬೆಲೆಗಳು ಮಂಗಳವಾರ ಗಮನಾರ್ಹವಾಗಿ ಏರಿಕೆಯಾಗಿವೆ. ಹಾಗೆಯೇ ಇದೇ ಅವಧಿಗೆ ದಿನಕ್ಕೆ 3,00,000 ಬ್ಯಾರೆಲ್ (ಬಿಪಿಡಿ) ರಫ್ತು ಕಡಿತವನ್ನು ಮುಂದುವರಿಸುವುದಾಗಿ ರಷ್ಯಾ ಕೂಡ ಹೇಳಿದೆ ಎಂದು ಆಯಿಲ್ ಪ್ರೈಸ್ (Oil Price) ವರದಿ ಮಾಡಿದೆ.
ತೈಲ ಮಾರುಕಟ್ಟೆಗಳಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾಗೆ ಸಹಕಾರ ನೀಡುತ್ತಿರುವ ರಷ್ಯಾ, ಕಚ್ಚಾ ತೈಲ ರಫ್ತುಗಳನ್ನು 3,00,000 ಬಿಪಿಡಿಗಳಷ್ಟು ಕಡಿಮೆ ಮಾಡುವ ಸ್ವಯಂಪ್ರೇರಿತ ನಿರ್ಧಾರವನ್ನು 2023 ರ ಅಂತ್ಯದವರೆಗೆ ವಿಸ್ತರಿಸಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ಪೂರೈಕೆ ನಿರ್ಬಂಧಗಳನ್ನು ಡಿಸೆಂಬರ್ 2023 ರವರೆಗೆ ವಿಸ್ತರಿಸಿದ ನಂತರ ಐಸಿಇ ಬ್ರೆಂಟ್ ಕ್ರೂಡ್ ಬೆಲೆಗಳು ಬ್ಯಾರೆಲ್ಗೆ 90 ಡಾಲರ್ಗಿಂತ ಹೆಚ್ಚಾಗಿವೆ.
1 ಮಿಲಿಯನ್ ಬಿಪಿಡಿಯಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದು, ಈ ಕ್ರಮವನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಿದೆ ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ. ಅಂದರೆ ವರ್ಷದ ಉಳಿದ ಅವಧಿಗೆ ಸೌದಿ ಅರೇಬಿಯಾದ ಉದ್ದೇಶಿತ ಕಚ್ಚಾ ತೈಲ ಉತ್ಪಾದನೆಯು 9 ಮಿಲಿಯನ್ ಬಿಪಿಡಿ ಆಗಿರಲಿದೆ. ಆದಾಗ್ಯೂ, ಈ ಉತ್ಪಾದನಾ ಕಡಿತದ ಕ್ರಮವನ್ನು ಮಾಸಿಕವಾಗಿ ಪರಿಶೀಲಿಸಲಾಗುವುದು ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ತೈಲ ಉತ್ಪಾದನಾ ರಾಷ್ಟ್ರಗಳ ಸಂಘಟನೆಯಾದ ಒಪೆಕ್ನಲ್ಲಿ ರಷ್ಯಾ ಮತ್ತು ಸೌದಿ ಅರೇಬಿಯಾದ ಕಚ್ಚಾತೈಲ ಉತ್ಪಾದನೆಯು ಪ್ರಮುಖ ಪಾತ್ರ ವಹಿಸಿರುವುದರಿಂದ, ಒಪೆಕ್ ತನ್ನ ತೈಲ ಉತ್ಪಾದನಾ ಕಾರ್ಯತಂತ್ರದೊಂದಿಗೆ ಯಾವ ರೀತಿ ಮುಂದುವರಿಯಲಿದೆ ಎಂಬುದರ ಬಗ್ಗೆ ಮಾರುಕಟ್ಟೆಗಳಲ್ಲಿ ಚರ್ಚೆ ಆರಂಭವಾಗಿವೆ. ಮಾರುಕಟ್ಟೆ ವಿಶ್ಲೇಷಕರು ವಾಡಿಕೆಯಂತೆ ತೈಲ ಬೆಲೆ ಪಾಯಿಂಟ್ ಗಳನ್ನು ಆಯ್ಕೆ ಮಾಡುತ್ತಾರೆ ಹಾಗೂ ಇದರಿಂದ ಸೌದಿ ಅರೇಬಿಯಾ ಇದೇ ರೀತಿಯ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಕಾರಣವಾಗಬಹುದು. ಕಳೆದ ಒಂದು ತಿಂಗಳಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಯು ಬ್ಯಾರೆಲ್ಗೆ 6 ಡಾಲರ್ ಹೆಚ್ಚಾಗಿರುವುದು ಗಮನಾರ್ಹ.
ಏತನ್ಮಧ್ಯೆ, ರಷ್ಯಾದಲ್ಲಿ ಬೇಸಿಗೆ ಇರುವುದರಿಂದ ಅಲ್ಲಿ ಸ್ಥಳೀಯವಾಗಿ ತೈಲಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಷ್ಯಾ ತನ್ನ ಕಚ್ಚಾತೈಲ ರಫ್ತುಗಳಲ್ಲಿ ಇಳಿಕೆ ಮಾಡಿದ್ದು, ರಷ್ಯಾದಿಂದ ಸಮುದ್ರಮಾರ್ಗವಾಗಿ ರಫ್ತಾಗುವ ಕಚ್ಚಾತೈಲ ಮತ್ತು ಇತರ ಉತ್ಪನ್ನಗಳ ಪ್ರಮಾಣ ಸೆಪ್ಟೆಂಬರ್ 2022 ರ ನಂತರ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ. ಜುಲೈ- ಆಗಸ್ಟ್ನಲ್ಲಿ 5,00,000 ಬಿಪಿಡಿಯಷ್ಟು ಕಚ್ಚಾತೈಲ ರಫ್ತು ಕಡಿತಗೊಳಿಸುವ ರಷ್ಯಾದ ಕ್ರಮದಿಂದ ಭಾರತಕ್ಕೆ ರಷ್ಯಾದಿಂದ ಪೂರೈಕೆಯಾಗುವ ಕಚ್ಚಾತೈಲದ ಪ್ರಮಾಣ ಶೇಕಡಾ 30 ರಷ್ಟು ಇಳಿದು 1.5 ಮಿಲಿಯನ್ ಬಿಪಿಡಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಸಾಮ್ಹಿ ಹೋಟೆಲ್ಸ್, ಮೋತಿಸನ್ಸ್ ಜ್ಯುವೆಲ್ಲರ್ಸ್ IPOಗೆ ಸೆಬಿ ಅನುಮತಿ