ಹೈದರಾಬಾದ್: ಕ್ರೆಡಿಟ್ ಸ್ಕೋರ್ ಎಂಬುದು ನಿಮ್ಮ ಮೂಲ ಹಣಕಾಸು ವಿಶ್ವಾಸಾರ್ಹತೆಯ ಪ್ರೊಫೈಲ್ ಅನ್ನು ತೋರಿಸುತ್ತದೆ. ಹೊಸ ಸಾಲ ಪಡೆಯಲು ನಿಮ್ಮ ಅರ್ಹತೆಯನ್ನು ಮಾತ್ರವಲ್ಲದೇ ನೀವು ಎಷ್ಟು ಆರ್ಥಿಕವಾಗಿ ಶಿಸ್ತುಬದ್ಧರಾಗಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಸಾಲಗಳ ಇಎಂಐಗಳನ್ನು (ಸಮಾನ ಮಾಸಿಕ ಕಂತುಗಳು) ನೀವು ಸರಿಯಾಗಿ ಪಾವತಿಸುತ್ತಿದ್ದೀರಾ ಅಥವಾ ಇಲ್ಲ ಎಂಬುದನ್ನು ಕೂಡ ಇದು ಹೇಳುತ್ತದೆ.
ಇನ್ನು ನೀವು ಸಾಲ ಪಡೆಯಲು ಅರ್ಹರಾಗಿದ್ದೀರಾ ಎಂಬುದನ್ನು ಸೇರಿದಂತೆ ನಿಮ್ಮ ಈ ಎಲ್ಲ ವಿವರಗಳನ್ನು ಕ್ರೆಡಿಟ್ ವರದಿಯಲ್ಲಿ ಪಡೆಯಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳನ್ನು ಬಹಿರಂಗಪಡಿಸುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಅದನ್ನು ಸುಧಾರಿಸಲು ಅತ್ಯಂತ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಪರಿಹಾರ ಕ್ರಮಗಳನ್ನು ನೀವು ಅನುಸರಿಸಬೇಕಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲವನ್ನು ತೆಗೆದುಕೊಳ್ಳುವ ನಿಮ್ಮ ಅರ್ಹತೆ ಮಾತ್ರವಲ್ಲದೇ ನಿಮ್ಮ ಒಟ್ಟಾರೆ ಆರ್ಥಿಕ ಶಿಸ್ತನ್ನೂ ಸೂಚಿಸುತ್ತದೆ. ಹೊಸ ಸಾಲವನ್ನು ತೆಗೆದುಕೊಳ್ಳುವಾಗ, ಸಾಲದಾತರು ನಿಮ್ಮ CIBIL (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್) ಸ್ಕೋರ್ ಅನ್ನು ನೋಡುತ್ತಾರೆ.
ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಿ: ನಿಮ್ಮ ಸಾಲದ ಅರ್ಜಿ ಅನುಮೋದಿಸಿದರೆ, ಸಂಬಂಧಿಸಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ನಿಮ್ಮ ಹಣಕಾಸಿನ ಪ್ರೊಫೈಲ್‌ನಲ್ಲಿ ನಂಬಿಕೆಯನ್ನು ಹೊಂದಿದೆ ಎಂದರ್ಥ. ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸುತ್ತಿದ್ದರೆ ನಿಮಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಹಬ್ಬಗಳ ಸಮಯದಲ್ಲಿ, ದೊಡ್ಡ ಮಟ್ಟದ ಖರೀದಿಗಳನ್ನು ಮಾಡಲು ನೀವು ಸಾಲ ತೆಗೆದುಕೊಂಡಿರಬಹುದು.
ಇದನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು. ಮರುಪಾವತಿಯಲ್ಲಿ ಯಾವುದೇ ವಿಳಂಬದಿಂದ ಭವಿಷ್ಯದಲ್ಲಿ ಸಾಲ ತೆಗೆದುಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ಸಾಲಗಳು ಮತ್ತು ಮರುಪಾವತಿಗಳೊಂದಿಗೆ ವ್ಯವಹರಿಸುವಾಗ ನೀವು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಬೇಕು.
ಮೊದಲನೆಯದಾಗಿ, ಸಾಲ ಮರುಪಾವತಿಯಲ್ಲಿ ಯಾವುದೇ ಗೊಂದಲ ಇರಬಾರದು. EMIಗಳು ನಿಮ್ಮ ಆದಾಯದ 40 ಪ್ರತಿಶತಕ್ಕಿಂತ ಹೆಚ್ಚಿರಬಾರದು. ಇದರಿಂದ ಇಎಂಐಗಳನ್ನು ನಿಯಮಿತವಾಗಿ ಪಾವತಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಿಮ್ಮ EMI ಗಳ ಎರಡು ತಿಂಗಳಿಗೆ ಸಮನಾದ ಮೊತ್ತವನ್ನು ನೀವು ಬ್ಯಾಂಕ್‌ನಲ್ಲಿ ಇಟ್ಟಿರಬೇಕು. ಸಾಲದ ಕಂತುಗಳ ಪಾವತಿಯಲ್ಲಿ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಮೊದಲ ಕಾರ್ಡ್ ಮಾತ್ರ ಬಳಸಲು ಪ್ರಯತ್ನಿಸಿ: ನೀವು ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರಬಹುದು. ಆದರೆ ಯಾವಾಗಲೂ ನೀವು ತೆಗೆದುಕೊಂಡ ಮೊದಲ ಕಾರ್ಡ್ ಅನ್ನು ಮಾತ್ರ ಬಳಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಕ್ರೆಡಿಟ್ ಪ್ರೊಫೈಲ್ ಹೆಚ್ಚಿನ ಸ್ಕೋರ್ ಪಡೆಯುತ್ತದೆ. ಇದು ನಿಮ್ಮ ಒಟ್ಟಾರೆ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ತುರ್ತು ಮತ್ತು ಅನಿರೀಕ್ಷಿತ ಹಣಕಾಸಿನ ಅಗತ್ಯಗಳ ಸಮಯದಲ್ಲಿ ನಿಮ್ಮ ರಕ್ಷಣೆಗೆ ಬರುತ್ತದೆ.
ಬ್ಯಾಂಕ್‌ಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕಳುಹಿಸುವ ಸಂದೇಶಗಳು ಅಥವಾ ಇಮೇಲ್ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಲು ಒಪ್ಪಿ ನೀವು ಈ ಸಂದೇಶಗಳನ್ನು ಕ್ಲಿಕ್ ಮಾಡಿದರೆ, ನೀವು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ.
ಅಂದರೆ ನಿಮಗೆ ಸಾಲ ಬೇಕಾಗಿದೆ ಎಂದು ನೀವು ಹೇಳಿದಂತಾಗುತ್ತದೆ. ಹೀಗೆ ಪದೇ ಪದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿ ಪ್ರತಿಕೂಲವಾಗಿ ಪ್ರತಿಫಲಿಸುತ್ತದೆ ಮತ್ತು ಅಂತಿಮವಾಗಿ ನಿಮ್ಮ ಕ್ರೆಡಿಟ್ ಪ್ರೊಫೈಲ್ ಹಾಳಾಗಲು ಕಾರಣವಾಗುತ್ತದೆ.
ಜಾಮೀನು ಹಾಕುವ ಮುನ್ನ ಯೋಚಿಸಿ: ಇನ್ನೊಂದು ಮುಖ್ಯವಾದ ವಿಷಯವೆಂದರೆ, ಇತರರು ತೆಗೆದುಕೊಂಡ ಸಾಲಗಳಿಗೆ ಜಾಮೀನು ಹಾಕುವಾಗ ಎಚ್ಚರಿಕೆ ವಹಿಸುವುದು. ಯಾವುದೇ ಸಾಲಕ್ಕೆ ಸಹ-ಅರ್ಜಿದಾರರಾಗಿ ಸಹಿ ಹಾಕುವ ಮುನ್ನ ಜಾಗರೂಕರಾಗಿರಿ. ಅಂಥ ಸಂದರ್ಭಗಳಲ್ಲಿ, ಮುಖ್ಯ ಅರ್ಜಿದಾರರು ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಪರಿಶೀಲಿಸಿ. ಒಂದು ವೇಳೆ ಅವರು ಸಾಲ ಮರುಪಾವತಿ ಮಾಡದಿದ್ದಲ್ಲಿ ಅದನ್ನು ನೀವು ಪಾವತಿಸಬೇಕಾಗುತ್ತದೆ ಎಂಬುದು ಗೊತ್ತಿರಲಿ.
ಕೆಲವೊಮ್ಮೆ ನೀವು ನಿಮ್ಮ EMI ಗಳು ಮತ್ತು ಬಿಲ್‌ಗಳನ್ನು ಸಕಾಲಿಕವಾಗಿ ಪಾವತಿಸಿದಾಗಲೂ, ನಿಮ್ಮ ಕ್ರೆಡಿಟ್ ರಿಪೋರ್ಟ್ನಲ್ಲಿ ಈ ವಿವರಗಳನ್ನು ಸರಿಯಾಗಿ ದಾಖಲಿಸದೇ ಇರಬಹುದು. ಆದ್ದರಿಂದ, ನೀವು ವರ್ಷಕ್ಕೊಮ್ಮೆಯಾದರೂ ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಬೇಕು. ಯಾವುದೇ ತಪ್ಪುಗಳಿದ್ದಲ್ಲಿ, ವಿಳಂಬವಿಲ್ಲದೆ ಸರಿಪಡಿಸಲು ಸಂಬಂಧಿಸಿದ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಬ್ಯೂರೋಗಳನ್ನು ಸಂಪರ್ಕಿಸಿ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ಗಳ ಮೇಲೆ ಆರ್ಬಿಐ ಹೊಸ ಮಾರ್ಗಸೂಚಿ: ಗ್ರಾಹಕರಿಗೆ ವರದಾನ