ನವದೆಹಲಿ : ಪ್ರಸ್ತುತ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ವ್ಯಾಪಿಸಿರುವ ನಕಾರಾತ್ಮಕ ಭಾವನೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ 10 ತಿಂಗಳ ಕನಿಷ್ಠವಾದ 83.14ಕ್ಕೆ ಕುಸಿದಿದೆ. ಆಗಸ್ಟ್ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಿಂದ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹೂಡಿಕೆಯನ್ನು ಹಿಂಪಡೆದಿರುವುದು ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ನ ರಿಟೇಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ದುರ್ಬಲ ಜಾಗತಿಕ ಸೂಚನೆಗಳ ನಡುವೆ ದೇಶೀಯ ಶೇರುಗಳು ಒತ್ತಡಕ್ಕೆ ಸಿಲುಕುತ್ತಿವೆ. ಏತನ್ಮಧ್ಯೆ ಇಂದು ನಿಫ್ಟಿ 100 ಪಾಯಿಂಟ್ ಅಥವಾ ಶೇಕಡಾ -0.5 ನಷ್ಟದೊಂದಿಗೆ 19,365 ಮಟ್ಟದಲ್ಲಿ ಕೊನೆಗೊಂಡರೆ, ಸೆನ್ಸೆಕ್ಸ್ 388.40 ಪಾಯಿಂಟ್ಗಳು ಅಥವಾ ಶೇಕಡಾ 0.59 ರಷ್ಟು ಕುಸಿದು 65,151.02 ಕ್ಕೆ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್-100 ಶೇಕಡಾ 0.2 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್-100 ಶೇಕಡಾ 0.1 ರಷ್ಟು ಏರಿಕೆಯಾಗಿವೆ. ಪಿಎಸ್ಯು ಬ್ಯಾಂಕುಗಳು ಮತ್ತು ಗ್ರಾಹಕ ಸರಕು ಸೂಚ್ಯಂಕ ಹೊರತುಪಡಿಸಿ ಎಲ್ಲಾ ವಲಯಗಳ ಶೇರುಗಳು ಇಳಿಕೆಯಲ್ಲಿ ಕೊನೆಗೊಂಡವು.
ಉತ್ತಮ ಆರಂಭದ ನಂತರ ಮಾರುಕಟ್ಟೆಗಳು ಇಳಿಯಲಾರಂಭಿಸಿದವು. ವಹಿವಾಟಿನ ಒಂದು ಸಮಯದಲ್ಲಿ ಸೆನ್ಸೆಕ್ಸ್ 65,000 ಕ್ಕೆ ಮತ್ತು ನಿಫ್ಟಿ 19,350 ಕ್ಕಿಂತ ಕೆಳಕ್ಕೆ ಇಳಿದಿತ್ತು. ಆದಾಗ್ಯೂ, ಇಂಟ್ರಾ- ಡೇ ಚೇತರಿಕೆಯ ಮಧ್ಯೆ ದಿನದ ಕನಿಷ್ಠ ಮಟ್ಟದಿಂದ ಶೇರುಗಳು ಮೇಲೆದ್ದವು. ಐಟಿಸಿ, ಎಲ್ಟಿಐ, ದಿವಿಸ್ ಲ್ಯಾಬ್, ಪವರ್ ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದ ಪ್ರಮುಖ ಶೇರುಗಳಾದರೆ ಅದಾನಿ ಪೋರ್ಟ್ಸ್, ಟೈಟಾನ್ ಕಂಪನಿ, ಅದಾನಿ ಎಂಟರ್ ಪ್ರೈಸಸ್, ಬಜಾಜ್ ಆಟೋ ಮತ್ತು ಎಸ್ಬಿಐ ಬ್ಯಾಂಕ್ ಲಾಭ ಗಳಿಸಿದವು.
ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳ ಸ್ವಲ್ಪ ಏರಿಕೆಯೊಂದಿಗೆ ವಿಶಾಲ ಸೂಚ್ಯಂಕಗಳು ಮುಖ್ಯ ಸೂಚ್ಯಂಕಗಳನ್ನು ಮೀರಿಸಿದವು. ವೈಯಕ್ತಿಕ ಶೇರುಗಳ ಪೈಕಿ ಬಾಟಾ ಇಂಡಿಯಾ, ಡಾಬರ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇರುಗಳ ಮೌಲ್ಯ ಶೇಕಡಾ 200 ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ.
ತ್ರಿಭುವನ್ ದಾಸ್ ಭೀಮ್ಜಿ ಜವೇರಿ, ಎಸ್ಎಂಎಲ್ ಇಸುಜು, ಸಕ್ ಸಾಫ್ಟ್, ಪ್ರಜ್ ಇಂಡಸ್ಟ್ರೀಸ್, ಪಟೇಲ್ ಎಂಜಿನಿಯರಿಂಗ್, ಲುಪಿನ್, ಜ್ಯೋತಿ ಲ್ಯಾಬ್ಸ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಗ್ರಾವಿಟಾ ಇಂಡಿಯಾ, ಫೋರ್ಸ್ ಮೋಟಾರ್ಸ್, ಎಸ್ಕಾರ್ಟ್ಸ್ ಕುಬೋಟಾ, ಡಿಬಿ ರಿಯಾಲ್ಟಿ ಮತ್ತು ಅಜಂತಾ ಫಾರ್ಮಾ ಸೇರಿದಂತೆ 200 ಕ್ಕೂ ಹೆಚ್ಚು ಶೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ಇದನ್ನೂ ಓದಿ : Elon Musk: ಸಂತಾನಾಭಿವೃದ್ಧಿ ಸಂಶೋಧನೆಗೆ $10 ಮಿಲಿಯನ್ ನೀಡಿದ 10 ಮಕ್ಕಳ ತಂದೆ ಮಸ್ಕ್!