ನವದೆಹಲಿ: ಆಪತ್ಕಾಲಕ್ಕೆ ಆಗಲಿ ಅಂತ ಜನರು ಸಾಮಾನ್ಯವಾಗಿ ಅಲ್ಪಾವಧಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಉಳಿತಾಯದ ಪ್ರಮಾಣ ಹಾಗೂ ಅಗತ್ಯಕ್ಕೆ ತಕ್ಕಂತೆ ಹಲವಾರು ವಿಭಿನ್ನ ರೀತಿಯ ಅಲ್ಪಾವಧಿ ಉಳಿತಾಯ ಯೋಜನೆಗಳು ಲಭ್ಯವಿವೆ. ಸಾಮಾನ್ಯವಾಗಿ ಏಳು ದಿನಗಳಿಂದ ಹಿಡಿದು 12 ತಿಂಗಳವರೆಗಿನ ಉಳಿತಾಯ ಯೋಜನೆಗಳನ್ನು ಅಲ್ಪಾವಧಿಯ ಉಳಿತಾಯ ಯೋಜನೆಗಳೆಂದು ಕರೆಯಲಾಗುತ್ತದೆ. ನೀವೂ ಕೂಡ ಅಲ್ಪಾವಧಿಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಇಲ್ಲಿದೆ ಅಂಥ ಉತ್ತಮ ಯೋಜನೆಗಳ ಮಾಹಿತಿ.
ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್: ಫಿಕ್ಸೆಡ್ ಡಿಪಾಸಿಟ್ ಇಡುವುದಾದರೆ ಬ್ಯಾಂಕ್ಗಳ ಸ್ಥಿರ ಠೇವಣಿ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆಯಾಗಿವೆ. ನೀವು ಇಲ್ಲಿ 7 ದಿನ, 14 ದಿನ, 30 ದಿನ ಮತ್ತು 45 ದಿನಗಳಿಂದ ಹಿಡಿದು ಒಂದು ವರ್ಷ ಅಥವಾ 10 ವರ್ಷಗಳವರೆಗೆ ಬ್ಯಾಂಕಿನಲ್ಲಿ ಎಫ್ಡಿ ಮಾಡಬಹುದು. ಎಫ್ಡಿ ಅವಧಿಯು ಆಯಾ ಬ್ಯಾಂಕಿನ ಮೇಲೆ ಅವಲಂಬಿತವಾಗಿರುತ್ತದೆ. ಎಫ್ಡಿಯ ಮುಕ್ತಾಯ ಅವಧಿ ಪೂರ್ಣಗೊಂಡ ನಂತರ ನೀವು ಹಣವನ್ನು ಹಿಂಪಡೆಯಬಹುದು ಮತ್ತು ಮರುಹೂಡಿಕೆ ಮಾಡಬಹುದು
ಆದಾಗ್ಯೂ, ಕೆಲ ಬ್ಯಾಂಕುಗಳಲ್ಲಿ ಎಫ್ಡಿ ಮುಕ್ತಾಯಗೊಳ್ಳುವ ಮೊದಲು ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ. ಇನ್ನು ಎಫ್ಡಿ ಮೇಲೆ ನೀಡಲಾಗುವ ಬಡ್ಡಿದರವು ಬ್ಯಾಂಕಿನ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 7 ದಿನಗಳಿಂದ 1 ವರ್ಷದವರೆಗಿನ ಅವಧಿಯ ಎಫ್ಡಿಗಳ ಮೇಲೆ ಶೇಕಡಾ 3 ರಿಂದ 5.75 ರಷ್ಟು ಬಡ್ಡಿದರವನ್ನು (ರಿಟರ್ನ್) ನೀಡುತ್ತದೆ. ಹಾಗೆಯೇ ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 3 ರಿಂದ 6 ರಷ್ಟು ಬಡ್ಡಿಯನ್ನು ನೀಡುತ್ತದೆ.
ಕಂಪನಿಗಳ ಎಫ್ಡಿ ಯೋಜನೆಗಳು: ಬ್ಯಾಂಕ್ ಎಫ್ಡಿಗಳಿಗೆ ಹೋಲಿಸಿದರೆ ಕಂಪನಿಗಳ ಎಫ್ಡಿ ಯೋಜನೆಗಳು ಹೆಚ್ಚು ಅಪಾಯದ ಅಂಶವನ್ನು ಹೊಂದಿರುತ್ತವೆ. ಒಂದೊಮ್ಮೆ ಎಫ್ಡಿ ಪಡೆದ ಕಂಪನಿಯು ನಷ್ಟಕ್ಕೀಡಾದಲ್ಲಿ ಅದಕ್ಕೆ ಸಾಲ ಕೊಟ್ಟವರು ಅದರ ಸ್ವತ್ತುಗಳ ಮೇಲೆ ಅಂತಿಮ ಹಕ್ಕನ್ನು ಹೊಂದಿರುತ್ತಾರೆ. ಉತ್ಪಾದನಾ ಕಂಪನಿಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ಅಲ್ಪಾವಧಿಯ ಅವಧಿಗೆ ಎಫ್ಡಿ ಯೋಜನೆಗಳನ್ನು ಜಾರಿಗೊಳಿಸುತ್ತವೆ.
ಈ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೊದಲು ಕಂಪನಿಯ ರೇಟಿಂಗ್ ಅನ್ನು ನೀವು ಪರಿಶೀಲಿಸುವುದು ಅಗತ್ಯ. ಕ್ರಿಸಿಲ್, ಕೇರ್ ಮತ್ತು ಐಸಿಎಆರ್ ನಂತಹ ರೇಟಿಂಗ್ ಏಜೆನ್ಸಿಗಳು ಕಂಪನಿಗಳಿಗೆ ರೇಟಿಂಗ್ ನೀಡಿರುತ್ತವೆ. ಐಸಿಐಸಿಐ ಹೋಮ್ ಫೈನಾನ್ಸ್ 1 ವರ್ಷದ ಎಫ್ಡಿ ಮೇಲೆ ಶೇಕಡಾ 7 ರಷ್ಟು ಆದಾಯ ನೀಡಿದರೆ, ಮಣಿಪಾಲ್ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಶೇಕಡಾ 8.25 ರಷ್ಟು ಆದಾಯ ನೀಡುತ್ತದೆ. ವಿಶೇಷವೆಂದರೆ ಮೆಚ್ಯೂರಿಟಿ ಅವಧಿಗೆ ಮುಂಚಿತವಾಗಿಯೇ ಎಫ್ಡಿಯನ್ನು ಹಿಂಪಡೆಯಬಹುದು. ಆದರೆ ಇದಕ್ಕಾಗಿ ಕಂಪನಿಯ ನಿಯಮದ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.
ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್: ಪೋಸ್ಟ್ ಆಫೀಸ್ಗಳಲ್ಲಿ ಕೂಡ ಬ್ಯಾಂಕ್ಗಳಂತೆ ಟರ್ಮ್ ಡಿಪಾಸಿಟ್ ಯೋಜನೆಗಳನ್ನು ನೀಡುತ್ತವೆ. 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಪೋಸ್ಟ್ ಆಫೀಸ್ ಎಫ್ಡಿ ಯೋಜನೆಗಳನ್ನು ಆಯ್ಕೆ ಮಾಡಬಹುದು. 'ಇಂಡಿಯನ್ ಪೋಸ್ಟ್ ವೆಬ್ಸೈಟ್' ಪ್ರಕಾರ, ಠೇವಣಿದಾರರು ಎಫ್ಡಿ ಠೇವಣಿ ಮಾಡಿದ ದಿನಾಂಕದಿಂದ 6 ತಿಂಗಳ ಮೊದಲು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಆದಾಗ್ಯೂ, ಠೇವಣಿದಾರರ ಖಾತೆಯನ್ನು 6 ತಿಂಗಳ ನಂತರ ಆದರೆ 1 ವರ್ಷದ ಮೊದಲು ಮುಚ್ಚಿದರೆ, ಅಂಚೆ ಕಚೇರಿ ಉಳಿತಾಯ ಖಾತೆಯ ಮೇಲೆ ನೀಡಲಾಗುವ ಬಡ್ಡಿಯನ್ನು ನೀಡಲಾಗುತ್ತದೆ. ಮೂರು ತಿಂಗಳ ಆಧಾರದಲ್ಲಿ ಬಡ್ಡಿ ಲೆಕ್ಕಾಚಾರ ಮಾಡಿದರೂ, ಬಡ್ಡಿಯನ್ನು ವಾರ್ಷಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ಗಳ ಮೇಲೆ ಸೆಪ್ಟೆಂಬರ್ 30, 2023 ರವರೆಗೆ 1 ವರ್ಷಕ್ಕೆ ಶೇಕಡಾ 6.9 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ : 90 ಡಾಲರ್ ದಾಟಿದ ಕಚ್ಚಾತೈಲ ಬೆಲೆ; ಸೌದಿ ಅರೇಬಿಯಾದಿಂದ ಉತ್ಪಾದನೆ ಕಡಿತದ ಎಫೆಕ್ಟ್