ಹೈದರಾಬಾದ್ : ದೇಶದಲ್ಲಿ 5G ಬಿಡುಗಡೆಯಾದ ನಂತರ 5G ಸೇವೆಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುವ ಆನ್‌ಲೈನ್ ವಂಚಕರ ಸೈಬರ್ ಫ್ರಾಡ್ಗಳ ಬಗ್ಗೆ ಜನತೆ ಜಾಗರೂಕರಾಗಿರುವಂತೆ ಹೈದರಾಬಾದ್‌ನ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ 13 ಮೆಟ್ರೋ ನಗರಗಳಲ್ಲಿ ಮೊಬೈಲ್ ಬಳಕೆದಾರರನ್ನು ಸೈಬರ್ ಕ್ರಿಮಿನಲ್‌ಗಳು ಗುರಿಯಾಗಿಸಿಕೊಂಡಿದ್ದಾರೆ. 4G ಯಿಂದ 5G ಗೆ ಬದಲಾಯಿಸುವ ನೆಪದಲ್ಲಿ ಜನರಿಗೆ ಲಿಂಕ್‌ಗಳನ್ನು ಕಳುಹಿಸುವ ಮೂಲಕ ವಂಚನೆ ಎಸಗಲಾಗುತ್ತಿದೆ.
APK (Android ಅಪ್ಲಿಕೇಶನ್ ಪ್ಯಾಕೇಜ್) ಫೈಲ್‌ಗಳ ಮೂಲಕ ಕಳುಹಿಸಲಾದ ಇಂಥ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಬಳಕೆದಾರರ ವೈಯಕ್ತಿಕ ಡೇಟಾ ಕದಿಯಬಹುದಾದ ಸ್ಕ್ಯಾಮ್ ಲಿಂಕ್‌ಗಳಿಗೆ ಬಳಕೆದಾರರನ್ನು ಕರೆದೊಯ್ಯುತ್ತದೆ ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ. ಅವು ಮಾಲ್ವೇರ್ ಫೈಲ್ಗಳಾಗಿರುವುದರಿಂದ ಅವು ಸೆಲ್ಫೋನ್ ಒಳಗೆ ನುಗ್ಗುತ್ತವೆ ಮತ್ತು ಗ್ರಾಹಕರ ಗೌಪ್ಯ ಮಾಹಿತಿಯನ್ನು ಸೈಬರ್ ಕ್ರಿಮಿನಲ್ಗಳಿಗೆ ಕಳುಹಿಸಿಕೊಡುತ್ತವೆ. ಒಂದು ವೇಳೆ ಫೋನ್ನಲ್ಲಿ ಖಾಸಗಿ ಫೋಟೊಗಳು ಅಥವಾ ರಹಸ್ಯಗಳಿದ್ದರೆ ಅವನ್ನು ಪಡೆದು ಗ್ರಾಹಕರನ್ನು ಬ್ಲ್ಯಾಕ್ಮೇಲ್ ಮಾಡಬಹುದು ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಎಪಿಕೆ ಫೈಲ್‌ಗಳ ಬಗ್ಗೆ ಇರಲಿ ಎಚ್ಚರಿಕೆ: ಆನ್‌ಲೈನ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ APK ಫೈಲ್‌ಗಳು ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಹ್ಯಾಕಿಂಗ್ ಅಪಾಯಕ್ಕೆ ಸಿಲುಕಿಸುತ್ತವೆ. ಸೈಬರ್ ಕ್ರಿಮಿನಲ್‌ಗಳು ಬಳಕೆದಾರರಿಗೆ 'ನೀವು ಅಮೂಲ್ಯ ಗ್ರಾಹಕರಾಗಿರುವುದರಿಂದ ನಾವು ನಿಮ್ಮನ್ನು ಆಯ್ಕೆ ಮಾಡಿದ್ದೇವೆ, '4G ಯಿಂದ 5G ಗೆ ಬದಲಾಯಿಸಲು, ನೀವು ಸಿಮ್ ಅನ್ನು ಬದಲಾಯಿಸಬೇಕು' ಮತ್ತು 'ಅಂತಹ ಅಗತ್ಯವಿಲ್ಲದೆ ನಾವು ನಿಮಗೆ ಅವಕಾಶ ನೀಡುತ್ತಿದ್ದೇವೆ' ಎಂದು ಪ್ರಲೋಭನಗೊಳಿಸುವ ಸಂದೇಶಗಳನ್ನು ಕಳುಹಿಸುತ್ತಾರೆ.
ನಿಜ ಎಂದು ನಂಬಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ: ತಮಗೆ ಮೊಬೈಲ್ನಲ್ಲಿ ಬಂದ ಸಂದೇಶಗಳನ್ನು ನಿಜವೆಂದು ನಂಬುವ ಕೆಲವರು, ಆ ಲಿಂಕ್ ಕ್ಲಿಕ್ ಮಾಡದಿದ್ದರೆ ಎಲ್ಲಿ ತಮಗೆ ಸಿಕ್ಕ ಸದವಕಾಶ ಕಳೆದುಹೋಗುತ್ತದೆಯೋ ಎಂಬ ಭೀತಿಯಿಂದ ಲಿಂಕ್ ಕ್ಲಿಕ್ ಮಾಡುತ್ತಾರೆ. ಆರಂಭದಲ್ಲಿ ಉಡುಗೊರೆ ಪಡೆಯಲು ಒಂದು ಚಿಕ್ಕ ಮೊತ್ತವನ್ನು ಯುಪಿಐ ಐಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಕಳುಹಿಸುವಂತೆ ಹ್ಯಾಕರ್ಸ್ ಹೇಳುತ್ತಾರೆ. ಸಣ್ಣ ಮೊತ್ತ ಪಾವತಿಗಾಗಿ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಗತಿ ಹರೋಹರ.. ನಿಮ್ಮ ಖಾತೆಯಲ್ಲಿರುವ ಅಷ್ಟೂ ಹಣ ಹ್ಯಾಕರ್ಗಳ ಅಕೌಂಟಿಗೆ ವರ್ಗಾವಣೆಯಾಗುತ್ತದೆ.
4ಜಿ ಯಿಂದ 5G ಗೆ ಬದಲಾಗಲು ಸಿಮ್ ಬದಲಾಯಿಸುವ ಅವಶ್ಯಕತೆ ಇಲ್ಲ: ತಂತ್ರಜ್ಞಾನ ತಜ್ಞ ನಲ್ಲಮೋಟು ಶ್ರೀಧರ್ ಹೇಳುವ ಪ್ರಕಾರ, ಈ ಹಿಂದೆ 3ಜಿಯಿಂದ 4ಜಿಗೆ ಬದಲಾಯಿಸುವಾಗ ಸಿಮ್ ಬದಲಾಯಿಸಬೇಕಿತ್ತು. ಆದರೆ ಈಗ ಅಂಥ ಅಗತ್ಯವಿಲ್ಲ. ಟೆಲಿಕಾಂ ಕಂಪನಿಗಳು 4G ಸಿಮ್‌ನಲ್ಲಿ 5G ಸೇವೆಗಳನ್ನು ಪಡೆಯುವ ತಂತ್ರಜ್ಞಾನವನ್ನು ಆವಿಷ್ಕರಿಸಿವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರ ಭಾನುವಾರದಂದು ನವದೆಹಲಿಯಲ್ಲಿ ನಡೆದ 6 ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಿದ್ದರು.
ಇದನ್ನು ಓದಿ:ಇನ್ವೆಸ್ಟ್ ರಾಜಸ್ಥಾನ: ಸಿಎಂ ಗೆಹ್ಲೋಟ್ ಶ್ಲಾಘಿಸಿದ ಉದ್ಯಮಿ ಅದಾನಿ.. ಕಾರಣ ಏನು ಗೊತ್ತೇನು?