ನವದೆಹಲಿ: ಭಾರತದಲ್ಲಿ ಬಂಡವಾಳ ಹೂಡಿಕೆ ಕಡಿಮೆ ಮಾಡಿಲ್ಲ ಅಥವಾ ನಿಲ್ಲಿಸಿಲ್ಲ, ನಮ್ಮ ಕಂಪನಿಯ ಬೆಳವಣಿಗೆಯು ಭಾರತದ ಅಭಿವೃದ್ಧಿಯೊಂದಿಗೆ ತಳಕು ಹಾಕಿಕೊಂಡಿದೆ ಎಂದು ದೇಶದ ಅತಿ ಶ್ರೀಮಂತ ವ್ಯಕ್ತಿ, ಬಂದರುಗಳಿಂದ ಹಿಡಿದು ಇಂಧನ ಕ್ಷೇತ್ರದ ಉದ್ಯಮ ಅಧಿಪತಿ ಗೌತಮ್ ಅದಾನಿ ಹೇಳಿದ್ದಾರೆ.
ಅದಾನಿ ಗ್ರೂಪ್‌ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ತೈಲದ ಆಮದುದಾರ ದೇಶದ ಬದಲಾಗಿ ಹಸಿರು ಹೈಡ್ರೋಜನ್ ರಫ್ತು ಮಾಡುವ ದೇಶವನ್ನಾಗಿಸಲು ಹೊಸ ಇಂಧನ ವ್ಯವಹಾರದಲ್ಲಿ ಕಂಪನಿಯು 70 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಹೇಳಿದರು.
ಅದಾನಿ ಸಮೂಹವು ಈಗ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ವಾಹಕನಾಗಿದೆ ಮತ್ತು ಹೋಲ್ಸಿಮ್ ಸ್ವಾಧೀನಪಡಿಸಿಕೊಳ್ಳುವ ಮೂಲಕ ಸಿಮೆಂಟ್ ವ್ಯವಹಾರ ಪ್ರವೇಶಿಸಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆಯ ಕುರಿತು ನಮಗೆ ಬೇರೆಯವರು ಉಪದೇಶ ಮಾಡುತ್ತಿರುತ್ತಾರೆ. ಆದರೆ, ಕೋವಿಡ್-19 ಮತ್ತು ಇಂಧನ ಪೂರೈಕೆ ಬಿಕ್ಕಟ್ಟಿನ ನಡುವೆಯೂ ನವೀಕರಿಸಬಹುದಾದ ಶಕ್ತಿಯ ಉಪಯೋಗಕ್ಕೆ ಒತ್ತು ನೀಡಿದ ಕೆಲವೇ ದೇಶಗಳಲ್ಲಿ ನಾವೂ ಒಬ್ಬರಾಗಿದ್ದೇವೆ. ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ನವೀಕರಿಸಬಹುದಾದ ಇಂಧನ ಗುರಿಗಳತ್ತ ಸಾಗುವುದನ್ನು ನಿಲ್ಲಿಸಿದ ಸಂದರ್ಭದಲ್ಲಿಯೂ ನಾವು ನಿಲ್ಲದೇ ಮುಂದುವರೆದಿದ್ದೇವೆ ಎಂದು ಗೌತಮ್ ಅದಾನಿ ತಿಳಿಸಿದರು.
ಇದನ್ನು ಓದಿ:ಭಾರತದಲ್ಲಿ 5G ಯುಗಾರಂಭಕ್ಕೆ ಮುನ್ನುಡಿ: ಸ್ಪೆಕ್ಟ್ರಮ್ ಹರಾಜು ಆರಂಭ