ಸ್ಯಾನ್ಫ್ರಾನ್ಸಿಸ್ಕೊ: ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮರವು ಐಫೋನ್ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು, ಈಗಿನ ದರದ ಮೇಲೆ ಹೆಚ್ಚುವರಿಯಾಗಿ ಶೇ 2ರಿಂದ 3ರಷ್ಟು ಬೆಲೆ ಏರಿಕೆ ಆಗಲಿದೆ.
ಅಮೆರಿಕ ಚೀನಾದ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಿಸಿದ್ದು, ಚೀನಾ ಕೂಡ ಅಮೆರಿಕಕ್ಕೆ ಸುಂಕದ ಮೂಲಕವೇ ಪ್ರತ್ಯುತ್ತರ ನೀಡಿದೆ. ನೂತನ ಪ್ರತೀಕಾರ ಸುಂಕವನ್ನು ಬೀಜಿಂಗ್ ಅನುಷ್ಠಾನಕ್ಕೆ ತರುತ್ತಿದ್ದು, ಆ್ಯಪಲ್ನ ಐಫೋನ್ ತಯಾರಿಕೆಯ ಮೇಲೆ ಉತ್ಪದಾನ ವೆಚ್ಚದ ಹೊರೆ ಬೀಳಲಿದೆ. ಹೀಗಾಗಿ, ಈಗಿನ ಐಫೋನ್ ಮಾರಾಟದ ಮೇಲೆ ಶೇ 2-3ರಷ್ಟು ಬೆಲೆ ಏರಿಕೆ ಆಗಲಿದೆ.
ಚೀನಾ ತಯಾರಿಸುವ ಐಫೋನ್ನ ಬ್ಯಾಟರಿ ಮತ್ತು ಇತರೆ ಬಿಡಿ ಭಾಗಗಳ ತಯಾರಿಕೆ ಮೇಲಿನ ಸುಂಕ ಏರಿಕೆ ಆಗಲಿದೆ. ಹೆಚ್ಚಾಗುವ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಏರಿಸಲಾಗುತ್ತಿದೆ ಎಂದು ವೆಡ್ಬ್ಬುಶ್ ವಿಶ್ಲೇಷಕ ಡಾನ್ ಐವ್ಸೆ ಹೂಡಿಕೆದಾರರಿಗೆ ಹೇಳಿದ್ದಾರೆ ಎಂದು ಫಾರ್ಚೂನ್ ಉಲ್ಲೇಖಿಸಿದೆ.
ಈ ಹಿಂದಿನಂತೆ ಪ್ರತಿ ಐಫೋನ್ ಮಾರಾಟದಿಂದ ಲಾಭಾಂಶ ಪಡೆಯಬೇಕಾದರೆ, ಆ್ಯಪಲ್ ಅಲ್ಪ ಪ್ರಮಾಣದ ಬೆಲೆ ಏರಿಸುವ ಅನಿವಾರ್ಯತೆ ಎದುರಾಗಿದೆ. ಉದಾ: ಐಫೋನ್ ಎಕ್ಸ್ಎಸ್ನ ಬೆಲೆ 999 ಡಾಲರ್ ಇದರೆ, ಬೆಲೆ ಏರಿಕೆ ಬಳಿಕ ಅದು 1,029 ಡಾಲರ್ಗೆ ತಲುಪಲಿದೆ ಎಂದು ವರದಿಯಾಗಿದೆ.
ಟ್ರಂಪ್ ಆಡಳಿತ ಈಗಾಗಲೇ ₹ 140 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸರಕುಗಳ ಮೇಲೆ ಆಮದು ಸುಂಕವನ್ನು ಶೇ 10ರಿಂದ ಶೇ 25ಕ್ಕೆ ಹೆಚ್ಚಿಸುವಂತೆ ಆದೇಶಿಸಿದ್ದಾರೆ. ಇನ್ನುಳಿದ ₹ 2.10 ಲಕ್ಷ ಕೋಟಿ ಮೌಲ್ಯದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಪ್ರಕ್ರಿಯೆ ಆರಂಭಿಸುವಂತೆಯೂ ಸೂಚಿಸಿದ್ದಾರೆ. ಒಂದು ವೇಳೆ ಇದು ಜಾರಿಗೆ ಬಂದರೆ ಗ್ರಾಹಕರು ಪ್ರತಿ ಐಫೋನ್ ಮೇಲೆ 200 ಡಾಲರ್ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ವಾಣಿಜ್ಯ ಸಮರದ ತೀವ್ರತೆಯ ಬಳಿಕ ಉಭಯ ರಾಷ್ಟ್ರಗಳು ಪರಸ್ಪರ ಸುಂಕ ಏರಿಕೆ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಉದ್ಬವಿಸಿದ ಮೊದಲ ವಾಣಿಜ್ಯಾತ್ಮಕ ಬಿಕ್ಕಟ್ಟು. ಟ್ರೇಡ್ ವಾರ್ ಹೀಗೆ ಮುಂದುವರಿದರೆ ಇತರೆ ಉತ್ಪನ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.