ನವದೆಹಲಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 2021ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆ ಹೆಚ್ಚಿಸುವುದಾಗಿ ತಿಳಿಸಿದೆ.
ಕಚ್ಚಾ ವಸ್ತುಗಳ ಪೂರೈಕೆ ವೆಚ್ಚದ ಹೆಚ್ಚಳದಿಂದ ಬೆಲೆ ಏರಿಸುವುದು ಅನಿವಾರ್ಯವಾಗಿದೆ. ಆದರೂ ತಯಾರಿಕಾ ವೆಚ್ಚ ಹೆಚ್ಚಳವನ್ನು ಆದಷ್ಟೂ ಭರಿಸಿ, ಕನಿಷ್ಠ ಹೆಚ್ಚಳದ ಹೊರೆಯನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ವಾಹನ ತಯಾರಕ ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
ಒಟ್ಟಾರೆಯಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ಬಹುತೇಕ ಎಲ್ಲ ವಾಹನ ತಯಾರಿಕಾ ಕಂಪನಿಗಳು ಮುಂದಿನ ತಿಂಗಳಿನಿಂದ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿವೆ.
ಇನ್ಪುಟ್ ವೆಚ್ಚಗಳಲ್ಲಿನ ಗಣನೀಯ ಹೆಚ್ಚಳ ಸರಿದೂಗಿಸಲು ಬೆಲೆಯೇರಿಕೆ ಅನಿವಾರ್ಯವಾಗಿದೆ. ಇಂಥ ಕಠಿಣ ಸಮಯದಲ್ಲಿ ಆಂತರಿಕ ಪ್ರಯತ್ನಗಳ ಮೂಲಕ ವೆಚ್ಚ ಹೆಚ್ಚಳ ತಗ್ಗಿಸುವುದು ನಮ್ಮ ಪ್ರಯತ್ನವಾಗಿದೆ. ಗ್ರಾಹಕರ ಮೇಲೆ ಬೆಲೆ ಏರಿಕೆಯ ಕನಿಷ್ಠ ಹೊರೆ ಬೀಳಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ ಸ್ನೇಹಿ ನೂತನ ಖನಿಜ ನೀತಿ ಜಾರಿಗೆ ಮುಂದಾದ ಸರ್ಕಾರ: ಹೊಸ ನೀತಿಯಲ್ಲಿ ಏನಿರಲಿದೆ?
ಯಾವೆಲ್ಲ ವಾಹನಗಳ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಟೊಯೋಟಾ ಇನ್ನೂ ಸ್ಪಷ್ಟಪಡಿಸಿಲ್ಲ. ಪ್ರಸ್ತುತ ಕಂಪನಿಯು ಪ್ರೀಮಿಯಂ ಮಾದರಿಯ ಗ್ಲೆಂಜಾದಿಂದ ಹಿಡಿದು ಅರ್ಬನ್ ಕ್ರೂಸರ್, ಯಾರಿಸ್, ಇನ್ನೋವಾ ಕ್ರಿಸ್ಟಾ, ಫಾರ್ಚೂನರ್, ಕ್ಯಾಮ್ರಿ ಮತ್ತು ವೆಲ್‌ಫೈರ್ ಮಾಡೆಲ್ ವಾಹನಗಳನ್ನು ತಯಾರಿಸುತ್ತಿದೆ.
ಟೊಯೋಟಾ ಮಾತ್ರವಲ್ಲದೆ ಮಾರುತಿ ಸುಜುಕಿ ಇಂಡಿಯಾ, ರೆನಾಲ್ಟ್ ಮತ್ತು ಇಸುಝು ಏಪ್ರಿಲ್‌ನಿಂದ ಬೆಲೆ ಏರಿಕೆ ಘೋಷಿಸಿವೆ. ಹೀರೋ ಮೊಟೊಕಾರ್ಪ್ ಮುಂದಿನ ತಿಂಗಳು ಬೆಲೆ ಏರಿಕೆ ಪ್ರಕಟಿಸಿದರೆ, ಹೋಂಡಾ 2 ವೀಲರ್ಸ್ ಇಂಡಿಯಾದ ಆಯ್ದ ಮಾದರಿಗಳ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ.