ಮುಂಬೈ : ಸತತ 4ನೇ ದಿನವೂ ಮುಂಬೈ ಷೇರಪೇಟೆಯಲ್ಲಿ ಕರಡಿ ಕುಣಿತ ಮುಂದುವರೆದಿದ್ದು, ದಿನದಾಂತ್ಯಕ್ಕೆ ಸೆನ್ಸೆಕ್ಸ್ 427 ಅಂಕಗಳ ಕುಸಿತ ಕಂಡು 59,037ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 139.85 ಅಂಕಗಳ ನಷ್ಟದೊಂದಿಗೆ 17 ಸಾವಿರದ 617ಕ್ಕೆ ತಲುಪಿದೆ.
ಜಾಗತಿಕ ಮಾರಕಟ್ಟೆಯಲ್ಲಿ ಏರಿಳಿತ ದೇಶಿಯ ಮಾರುಕಟ್ಟೆಯ ಮೇಲೂ ಬೀರಿದ ಪರಿಣಾಮದಿಂದಾಗಿ ಬಜಾಜ್ ಫಿನ್‌ಸರ್ವ್, ಎಲ್&ಟಿ ಹಾಗೂ ಇನ್ಫೋಸಿಸ್ ಷೇರುಗಳು ಹೆಚ್ಚು ನಷ್ಟ ಅನುಭವಿಸಿವೆ. ಶೇ.5.37ರಷ್ಟು ಷೇರುಗಳ ಮೌಲ್ಯ ಕಳೆದುಕೊಳ್ಳುವ ಮೂಲಕ ಇನ್ಫೋಸಿಸ್ ನಷ್ಟ ಕಂಡ ಕಂಪನಿಗಳ ಪೈಕಿ ಅಗ್ರಸ್ಥಾನ ಪಡೆಯಿತು. ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಇಂಡಸ್ ಇಂಡ್ ಬ್ಯಾಂಕ್ ನಷ್ಟ ಅನುಭವಿಸಿದ ಇತರೆ ಸಂಸ್ಥೆಗಳು.
ಹೆಚ್‌ಯುಎಲ್, ಮಾರುತಿ, ಹೆಚ್‌ಡಿಎಫ್‌ಸಿ ಹಾಗೂ ಟಿಸಿಎಸ್ ಶೇ.2.68ರಷ್ಟು ಲಾಭಗಳಿಸಿದವು. ಏಷ್ಯಾದ ಇತರ ಮಾರುಕಟ್ಟೆಗಳಾದ ಹಾಂಗ್ ಕಾಂಗ್, ಸಿಯೋಲ್, ಶಾಂಘೈ ಮತ್ತು ಟೋಕಿಯೋ ಷೇರುಗಳು ಕೂಡ ನಷ್ಟದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.
ಮತ್ತೊಂದೆಡೆ ಯುರೋಪ್‌ನ ಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿವೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.1.92ರಷ್ಟು ಕುಸಿದು 86.68 ಡಾಲರ್‌ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ವೃದ್ಧಿಸಿಕೊಂಡಿದ್ದು, 74.43ರಲ್ಲಿ ದಿನದ ವಹಿವಾಟು ಪೂರ್ಣಗೊಳಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ