ಮುಂಬೈ: ಮಾರುಕಟ್ಟೆ ಮಾನದಂಡ ಬಿಎಸ್‌ಇ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 300 ಅಂಕ ಏರಿಕೆಯಾಗಿ ಮತ್ತೆ 40,000 ಅಂಕಗಳ ಗಡಿದಾಟಿದೆ.
ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್ 400 ಅಂಕ ಏರಿದ ಬಳಿಕ 30 -ಷೇರುಗಳ ಸೂಚ್ಯಂಕವು ಅಂತಿಮವಾಗಿ 303.72 ಅಂಕ ಅಥವಾ ಶೇ 0.76ರಷ್ಟು ಹಚ್ಚಳವಾಗಿ 40,182.67 ಅಂಕಗಳಿಗೆ ತಲುಪಿತು. ಇಂಟ್ರಾ-ಡೇ ಗರಿಷ್ಠ 40,468.88 ಮತ್ತು ಕನಿಷ್ಠ 40,062.23 ಅಂಕಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 95.75 ಅಂಕ ಅಥವಾ ಶೇ 0.82ರಷ್ಟು ಏರಿಕೆ ಕಂಡು 11,834.60 ಅಂಕಗಳಲ್ಲಿ ಕೊನೆಗೊಳಿಸಿತು. ನಾಳೆ (ಶುಕ್ರವಾರ) ಆರ್ಬಿಐನ ವಿತ್ತೀಯ ನೀತಿ ಸಮಿತೆ ಸಭೆಯ ಕೊನೆಯ ದಿನವಾಗಿದ್ದು, ಬಡ್ಡಿದರ ಪ್ರಕಟವಾಗುವ ಸಾಧ್ಯತೆ ಇದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಎಚ್‌ಡಿಎಫ್ ಮತ್ತು ಸನ್ ಫಾರ್ಮಾ ಗರಿಷ್ಠ ಲಾಭ ಮಾಡಿಕೊಂಡವು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಪ್ರತಿ ಈಕ್ವಿಟಿ ಷೇರಿಗೆ 3,000 ರೂ. ದರದಲ್ಲಿ 16,000 ಕೋಟಿ ರೂ. ಮರು ಖರೀದಿ (ಬೈಬ್ಯಾಕ್) ಯೋಜನೆ ಘೋಷಿಸಿದೆ. ಮತ್ತೊಂದಡೆ ಒಎನ್‌ಜಿಸಿ, ಐಟಿಸಿ, ಪವರ್‌ಗ್ರಿಡ್, ರಿಲಯನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎಲ್ & ಟಿ ಕೆಂಪು ಬಣ್ಣದಲ್ಲಿ ಕೊನೆಗೊಂಡವು.
ಏಷ್ಯಾದ ಇತರ ಮಾರುಕಟ್ಟೆಗಳಾದ ಶಾಂಘೈ, ಸಿಯೋಲ್ ಮತ್ತು ಟೋಕಿಯೊದಲ್ಲಿ ಏರಿಕೆ ಮಟ್ಟದಲ್ಲಿ ಕೊನೆಗೊಂಡರೆ, ಹಾಂಕಾಂಗ್ ನಷ್ಟದೊಂದಿಗೆ ಅಂತ್ಯವಾಯಿತು. ಆರಂಭಿಕ ವಹಿವಾಟಿನಲ್ಲಿ ಯುರೋಪಿನಲ್ಲಿನ ಸ್ಟಾಕ್ ಎಕ್ಸ್ಚೇಂಜ್ಗಳು ಹೆಚ್ಚಿನ ವಹಿವಾಟು ನಡೆಸುತ್ತಿದ್ದವು.
ಅಂತಾರಾಷ್ಟ್ರೀಯ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ 1.62ರಷ್ಟು ಹೆಚ್ಚಳವಾಗಿ 42.67 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಡಾಲರ್ ವಿರುದ್ಧ 9 ಪೈಸೆ ಬಲಗೊಂಡು 73.24 ರೂ.ಗೆ ಇಳಿಯಿತು.