ಮುಂಬೈ: ಜಾಗತಿಕ ಸಮುದಾಯ ರಾಷ್ಟ್ರಗಳಲ್ಲಿ ತೂರಿ ಬಂದ ಮಿಶ್ರ ಪ್ರತಿಕ್ರಿಯೆಯಿಂದಾಗಿ ಮುಂಬೈ ಷೇರು ಪೇಟೆಯು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನಕರಾತ್ಮಕವಾಗಿ ಸಾಗಿದೆ.
ಕಳೆದ ಶುಕ್ರವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ (ಪಿಎಸ್ಬಿ) 10 ಬ್ಯಾಂಕ್ಗಳನ್ನು ವಿಲೀನಗೊಳಿಸಿ ಈಗಿನ 18 ಬ್ಯಾಂಕ್ಗಳ ಸಂಖ್ಯೆ 12ಕ್ಕೆ ತಗ್ಗಿಸುವುದಾಗಿ ಘೋಷಿಸಿದ್ದರು. ವಾಹನಗಳ ಮಾರಾಟ ಬೆಳವಣಿಗೆಗೆ ಸಂಬಂಧಿಸಿದಂತೆ ಭಾನುವಾರ ಬಿಡುಗಡೆಯಾದ ಆಗಸ್ಟ್ ತಿಂಗಳ ಅಂಕಿ ಅಂಶಗಳು, 'ಉದ್ಯಮದಲ್ಲಿ ಋಣಾತ್ಮಕ ಪ್ರವೃತ್ತಿ ಮುಂದುವರಿದಿದೆ' ಎಂಬುದಾಗಿ ಬಹಿರಂಗ ಪಡಿಸಿದ್ದವು.
ಈ ಎರಡೂ ಬೆಳವಣಿಗೆಯ ಬೆನ್ನಲ್ಲೇ ಮಂಗಳವಾರ ಆರಂಭವಾದ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಮೌಲ್ಯ ಮುಗ್ಗಿರಿಸಿದೆ. ಪ್ರತಿಯಾಗಿ ಸೆನ್ಸೆಕ್ಸ್ ಬೆಳಗ್ಗೆ 10.17ರ ವೇಳೆಗೆ 349 ಅಂಶಗಳು ಕುಸಿದು 36,983.60 ಅಂಶಗಳ ಮಟ್ಟದಲ್ಲೂ ಹಾಗೂ ನಿಫ್ಟಿ 117.95 ಅಂಶಗಳ ಇಳಿಕೆಯೊಂದಿಗೆ 10,905.95ರ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಪಿಎಸ್ಬಿಯ ಇಂಡಿಯಾ ಬ್ಯಾಂಕ್, ಪಿಎನ್ಬಿ, ಒಬಿಸಿ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಷೇರುಗಳಲ್ಲಿ ಶೇ 6ರಷ್ಟು ಇಳಿಕೆಯಾಗಿದೆ. ಇದರ ಜೊತೆಗೆ ಯೆಸ್ ಬ್ಯಾಂಕ್, ಇಂಡಸ್ಲ್ಯಾಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಹೆಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಒಎನ್ಜಿಸಿ ಸೇರಿದಂತೆ ಇತರೆ ಷೇರುಗಳ ದರ ಕೂಡ ಇಳಿಕೆ ಕಂಡಿವೆ.
ಹೀರೋ ಮೋಟಾರ್ಸ್, ಟಿಸಿಎಸ್, ಎಚ್ಸಿಎಲ್ ಟೇಕ್, ಪವರ್ ಗ್ರೀಡ್, ಇನ್ಫೋಸಿಸ್, ಬಜಾಜ್ ಆಟೊ ಷೇರುಗಳು ಮೌಲ್ಯದಲ್ಲಿ ಏರಿಕೆ ದಾಖಲಾಗಿದೆ. ಟೊಕಿಯೋ, ಹಾಂಕ್ ಕಾಂಗ್, ಸಿಯೋಲ್ ಸಿಡ್ನಿ, ಶಾಂಘೈ, ಯುಎಸ್ ಷೇರು ಪೇಟೆಗಳಲ್ಲಿ ಏರಿಳಿತ ಕಂಡುಬಂದಿದೆ.