ಮುಂಬೈ: ಮುಂಬೈ ಷೇರುಪೇಟೆಯ ಮಂಗಳವಾರದ ವಹಿವಾಟಿನಂದು ಬ್ಯಾಂಕಿಂಗ್ ವಲಯದ ಷೇರುಗಳು ತೀವ್ರವಾದ ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 163 ಅಂಶ ಕುಸಿತ ದಾಖಲಿಸಿದೆ.
ಆರಂಭಿಕ ವಹಿವಾಟಿನಿಂದಲೇ ಹೂಡಿಕೆದಾರರು ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿ ಬ್ಯಾಂಕ್ ಷೇರುಗಳನ್ನು ಮಾರಾಟ ಮಾಡಿದ್ದರು. ತತ್ಪರಿಣಾಮ ಮಧ್ಯಾಹ್ನ ವೇಳೆಗೆ ಸೆನ್ಸೆಕ್ಸ್ ಶೇ 2ರಷ್ಟು ಇಳಿಕೆಯಾಗಿ 31,000 ಅಂಶಗಳಲ್ಲಿ ವಹಿವಾಟು ನಡೆಸಿತು. ಕೊನೆಯ ಒಂದು ತಾಸಿನ ಅವಧಿಯಲ್ಲಿ ಮತ್ತೆ ಸುಧಾರಿಸಿಕೊಂಡ ಪೇಟೆ ಅಂತಿಮವಾಗಿ 163 ಅಂಶಗಳಷ್ಟು ಇಳಿಕೆ ಕಂಡಿತು.
ಏಷ್ಯನ್ ಪೇಯಿಂಟ್ಸ್, ಅಲ್ಟ್ರಾ ಸಿಮೆಂಟ್, ಎಲ್ಟಿ, ಒಎನ್ಜಿಸಿ, ಎಚ್ಯುಎಲ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎಸ್ಬಿಐ ಹಾಗೂ ಕೋಟ್ಯಾಕ್ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಇಳಿಕೆ ಕಂಡವು.
ಎನ್ಟಿಪಿಸಿ, ಭಾರ್ತಿ ಏರ್ಟೆಲ್, ಬಜಾಜ್ ಆಟೋ, ಟೈಟಾನ್, ಐಟಿಸಿ, ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಹೀರೋ ಮೋಟೊಕಾರ್ಪ್, ಮಾರುತಿ, ಸನ್ ಫಾರ್ಮಾ, ಟೆಕ್ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿವೆ.
ಭಾರತೀಯ ರೈಲ್ವೆ ವಿಶೇಷ ರೈಲುಗಳ ಸಂಚಾರ ನಡೆಸುತ್ತಿದ್ದು, ಆನ್‌ಲೈನ್ ಬುಕ್ಕಿಂಗ್‌ಗೆ ಅವಕಾಶ ನೀಡಿರುವುದರಿಂದ ಐಆರ್‌ಸಿಟಿಸಿ ಷೇರು ಶೇ 5ರಷ್ಟು ಏರಿಕೆ ಆಯಿತು.
ಸೋಮವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು 534.87 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕವಾಗಿ ಹಾಗೂ ಭಾರತದಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿರುವ ಆತಂಕದಿಂದ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ, ಇದು ಕೂಡ ಕಾರಣ ಆಗಿರಬಹದು.