ನವದೆಹಲಿ: ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ಭಾರತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಪ್ರತಿಸ್ಪರ್ಧೆಯೊಬ್ಬ ಹುಟ್ಟಿಕೊಂಡಿದ್ದಾನೆ.
ಉದ್ಯೋಗ ಭವನದ ಪ್ರಮುಖ ನೀತಿ ನಿರೂಪಕರಿಂದ ಹಿಡಿದು ಅಕ್ಕಿ ರಫ್ತು ಮಾಡುವ ಉನ್ನತ ಮಿಲ್ಗಳವರೆಗೆ ಎಲ್ಲರೂ ಚೀನಾವನ್ನು ಎಚ್ಚರಿಕೆಯಿಂದ ನೋಡುತ್ತಿದ್ದಾರೆ. ಭಾರತದ ಹಿಡಿತದಲ್ಲಿರುವ ಆಫ್ರಿಕಾ ಮಾರುಕಟ್ಟೆಗಳಲ್ಲಿ ಟನ್ಗಟ್ಟಲೇ ಅಕ್ಕಿ ರವಾನಿಸುತ್ತಿದೆ.
ಚೀನಾ ಅಕ್ಕಿ ರಫ್ತಿನ ವಹಿವಾಟನ್ನು ಬಹಳ ಸ್ಪರ್ಧಾತ್ಮಕ ಬೆಲೆಗೆ ಹೆಚ್ಚಿಸುತ್ತಿದೆ ಎಂಬುದು ನಮಗೆ ತಿಳಿದು ಬಂದಿದೆ. ಅದರ ಒಟ್ಟಾರೆ ರಫ್ತು ಪ್ರಮಾಣಕ್ಕೆ ಅನುಗುಣವಾಗಿ ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಫ್ತು ವಿಭಾಗದ (ಕೃಷಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಚೀನಾ ತನ್ನ ಸರ್ಕಾರಿ ಸ್ವಾಮ್ಯದ ಗೋದಾಮುಗಳಿಂದ 3 ಮಿಲಿಯನ್ ಟನ್ ಬಿಳಿ ಅಕ್ಕಿ ರಫ್ತು ಮಾಡಿದೆ. ಈ ಸರಕುಗಳಲ್ಲಿ ಹೆಚ್ಚಿನ ಭಾಗ ಆಫ್ರಿಕಾ ದೇಶಗಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಭಾರತ ಬಾಸ್ಮತಿ ರಹಿತ ಅಕ್ಕಿಯನ್ನು ಪ್ರತಿ ಟನ್‌ಗೆ 400 ಡಾಲರ್ ಬೆಲೆಯಲ್ಲಿ ರಫ್ತು ಮಾಡುತ್ತಿದೆ. ಆದರೆ, ಚೀನಾ ಗಣನೀಯವಾಗಿ ಕಡಿಮೆ ಬೆಲೆಗೆ ಅಕ್ಕಿಯನ್ನು ನೀಡುತ್ತಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ಚೀನಾ ಪ್ರತಿ ಟನ್‌ಗೆ 300 ರಿಂದ 320 ಡಾಲರ್ ದರದಲ್ಲಿ ರಫ್ತು ಮಾಡುತ್ತಿದೆ ಎಂದು ಉತ್ತರಾಖಂಡದ ಅಕ್ಕಿ ರಫ್ತುದಾರ ಲಕ್ಷ್ಯ ಅಗರ್ವಾಲ್ ಹೇಳಿದರು. ಭಾರತೀಯ ಮತ್ತು ಚೀನಾದ ದರಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದು ಭಾರತದ ದೀರ್ಘಾವಧಿಯ ರಫ್ತುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಗರ್ವಾಲ್ ಹೇಳಿದರು.
ದಶಕಗಳಿಂದ ಭಾರತ ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶ. ನಂತರ ಸ್ಥಾನದಲ್ಲಿ ಥೈಲ್ಯಾಂಡ್, ವಿಯೆಟ್ನಾಂ ಮತ್ತು ಪಾಕಿಸ್ತಾನಗಳಿವೆ. ಭಾರತವು ಉನ್ನತ ಸ್ಥಾನ ಇದ್ದರೂ ಬಾಸ್ಮತಿ ರಹಿತ ಅಕ್ಕಿಯ ರಫ್ತಿನ ವೇಗ ಕುಗ್ಗುತ್ತಿದೆ. 2019ರಲ್ಲಿ (ಏಪ್ರಿಲ್ನಿಂದ ನವೆಂಬರ್) ಭಾರತ 9,028.34 ಕೋಟಿ ರೂ. ಮೌಲ್ಯದ ಅಕ್ಕಿ ರಫ್ತು ಮಾಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 14,059.51 ಕೋಟಿ ರೂ.ಯಷ್ಟು ರಫ್ತು ಮಾಡಿತ್ತು.
ಪ್ರಸಕ್ತ ಎಂಟು ತಿಂಗಳ ಆರಂಭದಲ್ಲಿ ಬಾಸ್ಮತಿರಹಿತ ರಫ್ತು ಪ್ರಮಾಣ ಶೇ. 35.78ಕ್ಕೆ ಇಳಿದಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.