ರಾಯಚೂರು: ಜಿಲ್ಲೆಯಲ್ಲಿ ರಿಲಯನ್ಸ್ ರಿಟೇಲ್ ಕಂಪನಿಯು, ಭತ್ತ ಕೃಷಿಕರ ಮುಖೇನ ನೇರವಾಗಿ ಸಾವಿರ ಟನ್ ಸೋನಾ ಮಸೂರಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.
ಸಿಂಧನೂರು ತಾಲೂಕಿನ ಸ್ವಾಸ್ಥ್ಯ ಫಾರ್ಮರ್ಸ್ ಪ್ರೊಡ್ಯೂಸಿಂಗ್ ಕಂಪನಿಯಿಂದ ಒಂದು ಸಾವಿರ ಟನ್ ಸೋನಾ ಮಸೂರಿ ಭತ್ತ ಖರೀದಿಸುವ ಒಪ್ಪಂದ ಏರ್ಪಟ್ಟಿದೆ. ಮಾರುಕಟ್ಟೆಯಲ್ಲಿ ಸರ್ಕಾರ ನೀಡುವ ಕ್ವಿಂಟಾಲ್ ಭತ್ತಕ್ಕೆ 1,850 ರೂ. ದರಕ್ಕಿಂತ ಸುಮಾರು 100 ರೂ. ಹೆಚ್ಚಿನ ದರ ನೀಡಿ ಖರೀದಿ ಮಾಡಲು ಮುಂದಾಗಿದೆ.
ಗುಣಮಟ್ಟದ ಆಧಾರದ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಮೊದಲ ಹಂತವಾಗಿ ಈಗಾಗಲೇ ಸಂಸ್ಥೆಯಿಂದ 100 ಟನ್ ಮಾರಾಟ ಮಾಡಲು ಉದ್ದೇಶಿಸಿ, 75 ಟನ್ವರೆಗೆ ಭತ್ತವನ್ನು ಮಾರಾಟ ಮಾಡಿದೆ. ಖರೀದಿಸಿರುವ ಭತ್ತವನ್ನು ಸಿಂಧನೂರಿನಲ್ಲಿ ವೇರ್ಹೌಸ್ನಲ್ಲಿ ಸಂಗ್ರಹಿಸಿಡಲಾಗಿದೆ. ಮಾರಾಟದ ಬಳಿಕ ಸಂಸ್ಥೆಗೆ ಹಣ ಪಾವತಿ ಮಾಡಲಾಗುವುದು ಎಂದು ಕಂಪನಿಯ ಅಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಇದನ್ನೂ ಓದಿ: 2022ರ ವಿತ್ತೀಯ ವರ್ಷದಲ್ಲಿ ಶೇ.10.1ಕ್ಕೆ ಜಿಗಿಯಲಿರುವ ಭಾರತದ ಜಿಡಿಪಿ : ಇಕ್ರಾ ರೇಟಿಂಗ್ಸ್
ರಿಲಯನ್ಸ್ ರಿಟೇಲ್ ಕಂಪನಿ ಈಗಾಗಲೇ ಪ್ರಾಯೋಗಿಕವಾಗಿ ರೈತರಿಂದ ಖರೀದಿ ವ್ಯಾಪಾರ ಆರಂಭಿಸಿದೆ. ಇದರಿಂದ ಭವಿಷ್ಯದಲ್ಲಿ ರೈತರಿಗೆ ಶೋಷಣೆಯಾಗಲಿದೆ. ಆರಂಭದಲ್ಲಿ ಸಾವಿರ ಟನ್ ಖರೀದಿ ಶುರು ಮಾಡಿದ್ದು, ಬರುವ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಿಸುವ ಯೋಜನೆಯಿದೆ. ಈ ರೀತಿಯಾದರೆ ಸ್ಥಳೀಯ ರೈಸ್ ಮಿಲ್ಗಳಿಗೆ ಮತ್ತು ವರ್ತಕರಿಗೆ ತೊಂದರೆ ಆಗಲಿದೆ. ಕಾರ್ಮಿಕರು ಕೆಲಸ ಕಳೆದುಕೊಂಡು ರೈಸ್ ಮಿಲ್ಗಳು ಮುಚ್ಚುವ ಸಂಭವವಿದೆ. ಆರಂಭಿಕವಾಗಿ ರೈತರನ್ನು ಆಕರ್ಷಿಸಲು ಎಂಎಸ್ಪಿಗಿಂತ 82 ರೂ. ಹೆಚ್ಚಳವಾಗಿ ಕೊಳ್ಳುತ್ತಿದ್ದು, ಸಂಸ್ಥೆಗೆ ಹಣ ಪಾವತಿ ಮಾಡಿದ ಬಳಿಕ ರೈತನಿಗೆ ಪಾವತಿ ಮಾಡುತ್ತದೆ. ಒಂದು ವೇಳೆ ಭತ್ತ ಖರೀದಿ ಮಾಡಿದ ಕಂಪನಿ, ರೈತ ಉತ್ಪಾದಕ ಸಂಸ್ಥೆಗೆ ಹಣ ಪಾವತಿ ಮಾಡದಿದ್ದರೆ ಆಗುವ ತೊಂದರೆ ಹೇಳತೀರದು. ರಿಲಯನ್ಸ್ ರಿಟೇಲ್ ಕಂಪನಿ ಜೊತೆಗಿನ ಈ ಒಪ್ಪಂದ ಭವಿಷ್ಯದಲ್ಲಿ ರೈತರಿಗೆ ಶೋಷಣೆಯಾಗುವ ಸಾಧ್ಯತೆಯಿದೆ ಎಂದು ರೈತ ಸಂಘದ ಮುಖಂಡ ಚಾಮರಸ ಮಾಲಿಪಾಟೀಲ್ ಹೇಳುತ್ತಾರೆ.