ನವದೆಹಲಿ: ಇ- ಸಿಗರೇಟ್ ನಿಷೇಧ ಮಾಡುವ ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.
ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ, ವಿತರಣೆ, ಉತ್ಪಾದನೆ, ತಯಾರಿಕೆ, ಪ್ರಚಾರ, ಸಂಗ್ರಹ ಹಾಗೂ ಆಮದು/ ರಫ್ತು ಅನ್ನು ನಿಷೇಧಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಇ- ಸಿಗರೇಟ್ ನಿಷೇಧಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದ್ದರು.
ಪರಿಷ್ಕೃತ ನಿಯಮದ ಅನ್ವಯ, ಇ- ಸಿಗರೇಟ್ ಸಂಬಂಧಿತ ಪುನರಾವರ್ತಿತ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂ.ವರೆಗೂ ದಂಡಾರ್ಹ ಶಿಕ್ಷೆ ನಿಗದಿಯಾಗಿದೆ. ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ.