ನವದೆಹಲಿ: ಗೌರಿ-ಗಣೇಶ ಹಬ್ಬಕ್ಕೆ ವಾಹನ ಚಾಲಕ ಮತ್ತು ಮಾಲೀಕರಿಗೆ ಪೆಟ್ರೋಲ್ ದರ ಏರಿಕೆಯ ಶಾಕಿಂಗ್ ಸುದ್ದಿಯ ಶುಭಾಶಯ ಹೇಳಲಾಗಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಹೆಚ್ಚಿಸಿವೆ. ಕಳೆದ ಒಂದು ವಾರದಲ್ಲಿ ಆರು ಬಾರಿ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೇಲೆ ಇಂದು 16 ಪೈಸೆ ಹೆಚ್ಚಳವಾಗಿ ಲೀಟರ್‌ಗೆ 81.35 ರೂ.ಗೆ ಮಾರಾಟ ಆಗುತ್ತಿದೆ. ಮುಂಬೈನಲ್ಲಿ ಇದು ಲೀಟರ್‌ಗೆ 88.02 ರೂ.ಯಲ್ಲಿ ಖರೀದಿ ಆಗುತ್ತಿದೆ.
ಜುಲೈನಲ್ಲಿ ಪೆಟ್ರೋಲ್ ಬೆಲೆಯಂತೆಯೇ ಡೀಸೆಲ್ ಬೆಲೆ ಸತತ 23 ದಿನಗಳವರೆಗೆ ಸ್ಥಿರವಾಗಿತ್ತು. ಜೂನ್ 29ರಿಂದ ಪೆಟ್ರೋಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಲಾಯಿತು. ಆದರೆ, ಡೀಸೆಲ್ ಬೆಲೆ ಅನಿಯಮಿತವಾಗಿ ಪರಿಷ್ಕರಿಸಲಾಗುತ್ತಿದೆ. ದೀರ್ಘ ವಿರಾಮದ ನಂತರ ಆಗಸ್ಟ್ 16ರಂದು ಪೆಟ್ರೋಲ್ ಬೆಲೆ ಪರಿಷ್ಕರಿಸಲಾಯಿತು. ಅಂದಿನಿಂದ ಪೆಟ್ರೋಲ್ ದರದಲ್ಲಿ ಸ್ಥಿರವಾದ ಏರಿಕೆ ಕಂಡು ಬಂದಿದೆ.
ಆಗಸ್ಟ್ 16ರಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 92 ಪೈಸೆ ಹೆಚ್ಚಳವಾಗಿದೆ, ಜುಲೈ 30ರಂದು ದೆಹಲಿ ಸರ್ಕಾರವು ವ್ಯಾಟ್ ಅನ್ನು ಶೇ 13.25ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದಾಗಿನಿಂದ ಡೀಸೆಲ್ ಬೆಲೆ ಸ್ಥಿರವಾಗಿ ಉಳಿಯಿತು. ಇದರಿಂದ 8.36 ರೂ.ಯಷ್ಟು ಕಡಿತವಾಗಿ 73.56 ರೂ.ಯಲ್ಲಿ ಮಾರಾಟ ಆಗುತ್ತಿದೆ.