ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಮಂಡಿಸಿದ 2019-20ರ ಬಜೆಟ್ ಬಳಿಕ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರಥಮ ಬಾರಿಗೆ ಗರಿಷ್ಠ ಏರಿಕೆ ದಾಖಲಾಗಿದೆ.
ವಿಶ್ವದಲ್ಲಿ ಅತೀ ಹೆಚ್ಚು ತೈಲ ರಫ್ತು ಮಾಡುವ ಸೌದಿ ಅರೇಬಿಯಾದ ಅರಾಮ್ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದು ಬ್ರೆಂಟ್ ಕಚ್ಚಾ ಇಂಧನ ಬೆಲೆ ಏರಿಕೆಗೆ ಪ್ರಮುಖ ಕಾರಣ. ಭಾರತ ಸೇರಿ ಹಲವು ರಾಷ್ಟ್ರಗಳಿಗೆ ತೈಲ ಕೊರತೆ ಆತಂಕ ಕಾಡಿದೆ. ದಾಳಿಯ ಪರಿಣಾಮ ಇಂಧನ ಚಿಲ್ಲರೆ ದರದಲ್ಲಿ ಏರಿಕೆಯಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಮೇಲೆ 25 ಪೈಸೆ ಏರಿಕೆಯಾಗಿ ₹ 72.42 ಹಾಗೂ ಡೀಸೆಲ್ನಲ್ಲಿ 24 ಪೈಸೆ ಹೆಚ್ಚಳವಾಗಿ ₹ 65.82 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಬಜೆಟ್ ಮಂಡನೆ ವೇಳೆ ಪ್ರತಿ ಲೀಟರ್ ತೈಲದ ಮೇಲೆ ₹ 2.50 ಸುಂಕ ಹೆಚ್ಚಿಸುವುದಾಗಿ ಸೀತಾರಾಮನ್ ಘೋಷಿಸಿದ್ದರು. ಈ ಬಳಿಕ ಒಂದೇ ದಿನದಲ್ಲಿ ಗರಿಷ್ಠ ಏರಿಕೆಯ ಬೆಲೆ ದಾಖಲಾಗಿದೆ.
ದಾಳಿಯಿಂದ ನಷ್ಟವಾದ ತೈಲ ಉತ್ಪಾದನೆಯನ್ನು ಸರಿದೂಗಿಸುವ ಭರವಸೆಯನ್ನು ಸೌದಿ ನೀಡಿದ್ದು ಅದರಂತೆ ನಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶನಿವಾರ ಶೇ 20ರಷ್ಟು ಏರಿಕೆ ಕಂಡಿದ್ದ ಕಚ್ಚಾ ತೈಲ, ಇಂದು ಶೇ 0.26ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ 64.38 ಡಾಲರ್ಗೆ ತಲುಪಿದೆ. ಅಮೆರಿಕದ ವೇಸ್ಟ್ ಟೆಕ್ಸಸ್ ಇಂಟರ್ಮೀಡಿಯಟ್ (ಡಬ್ಲ್ಯುಡಿಐ) ಕಚ್ಚಾ ತೈಲ ಸಹ ಶೇ 0.5ರಷ್ಟು ಕ್ಷೀಣಿಸಿ ಪ್ರತಿ ಬ್ಯಾರೆಲ್ 59.06 ಡಾಲರ್ಗೆ ಮಾರಾಟವಾಗುತ್ತಿದೆ.