ನವದೆಹಲಿ: ರಾಜಕೀಯವಾಗಿ ಸೂಕ್ಷ್ಮವಾಗಿರುವ ನಿತ್ಯದ ಗೃಹಪಯೋಗಿ ಸರಕು ಈರುಳ್ಳಿ ಸೋಮವಾರ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 100 ರೂ.ಗೆ ಖರೀದಿಯಾಗಿದೆ.
ಕರ್ನಾಟಕವು ದೇಶದ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಸರ್ಕಾರದ ಅಂಕಿ-ಅಂಶಗಳು ಸೂಚಿಸುತ್ತವೆ. ಆದರೆ ರಾಜಸ್ಥಾನದ ಉದಯಪುರ ಮತ್ತು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ರಾಂಪುರ್ಹಾಟ್ನಲ್ಲಿ 35 ರೂ.ಗೆ ಕೆಜಿಯಂತೆ ಮಾರಾಟ ಆಗುತ್ತಿದೆ. ದೇಶದ 114 ನಗರಗಳಲ್ಲಿ ಬೆಲೆ ಪ್ರವೃತ್ತಿಗಳನ್ನು ಸರ್ಕಾರವು ನಿತ್ಯವೂ ಮೇಲ್ವಿಚಾರಣೆ ಮಾಡುತ್ತದೆ. ಆದರೂ ದರ ನಿಯಂತ್ರಣಕ್ಕೆ ಬರುತ್ತಿಲ್ಲ.
ಅಖಿಲ ಭಾರತದಾದ್ಯಂತ ನಿತ್ಯದ ಈರುಳ್ಳಿಯ ಸರಾಸರಿ ಬೆಲೆ ಸೋಮವಾರ ಕೆಜಿಗೆ 70 ರೂ.ನಷ್ಟಿದೆ. ಉತ್ಪನ್ನ ಬೆಳೆಯು ಪ್ರದೇಶಗಳಲ್ಲಿಯೂ ಸಹ ಗ್ರಾಹಕರು ಹೆಚ್ಚಿನ ದರ ಕೊಟ್ಟು ಖರೀದಿಸುತ್ತಿದ್ದಾರೆ.
ಮಹಾರಾಷ್ಟ್ರವು ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿದ್ದರೂ ಮುಂಬೈಯಲ್ಲಿನ ಸರಕು ಚಿಲ್ಲರೆ ಬೆಲೆ ಕೆಜಿಗೆ ₹ 77 ಆಗಿದೆ. ಪ್ರಮುಖ ಬಳಕೆ ಮಾರುಕಟ್ಟೆಗಳಲ್ಲಿ ಒಂದಾದ ದೆಹಲಿಯಲ್ಲಿ ಸಹ ರೀತಿಯ ಪರಿಸ್ಥಿತಿ ಇದೆ. ಅಲ್ಲಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ₹ 65 ಇದ್ದರೆ, ಕೋಲ್ಕತ್ತಾದಲ್ಲಿ ಪ್ರತಿ ಕೆಜಿಗೆ ₹ 70 ಮತ್ತು ಚೆನ್ನೈನಲ್ಲಿ ಕೆಜಿಗೆ ₹ 72 ಇದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
ಗುಣಮಟ್ಟ ಮತ್ತು ಪ್ರದೇಶ ಅವಲಂಬಿಸಿ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ. ಸರ್ಕಾರ ನಿರ್ವಹಿಸುವ ಚಿಲ್ಲರೆ ಬೆಲೆಗಳು ಸಾಮಾನ್ಯವಾಗಿ ವ್ಯಾಪಾರ ದತ್ತಾಂಶಕ್ಕಿಂತ ಪ್ರತಿ ಕೆಜಿ ಮೇಲೆ 10-20 ರೂ.ನಷ್ಟು ಕಡಿಮೆ ಆಗಿರುತ್ತವೆ. ವ್ಯಾಪಕವಾಗಿ ಬೆಳೆಯುವ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಈ ವರ್ಷದ ಖಾರಿಫ್ ಬೆಳೆಗೆ ಹಾನಿಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಕಳೆದ ಕೆಲವು ವಾರಗಳಿಂದ ಗಗನಕ್ಕೇರಿದೆ.